ಗೀತಾ ಹುಟ್ಟುಹಬ್ಬಕ್ಕೆ ಎಂದೂ ಒಡವೆ, ಸೀರೆ ಕೇಳಲಿಲ್ಲ: ಸೀತಾರಾಮ್

– ಹುಟ್ಟುಹಬ್ಬ ಮರೆತೆನೆಂದು ಗೀತಾ ಎಂದೂ ನೊಂದುಕೊಂಡಿಲ್ಲ

ಬೆಂಗಳೂರು: ಜನಪ್ರಿಯ ನಿರ್ದೇಶ ಟಿ.ಎನ್ ಸೀತಾರಾಮ್ ಅವರ ಪತ್ನಿ ಗೀತಾ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಪತ್ನಿಯ ಬರ್ತ್ ಡೇ ವಿಶೇಷವಾಗಿ ಸೀತಾರಾಮ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವ ಸೀತಾರಾಮ್ ಅವರು, ಇತ್ತೀಚೆಗಷ್ಟೇ ತಮ್ಮ ನಿರ್ದೇಶನದ ಮಗಳು ಜಾನಕಿ ಧಾರವಾಹಿಯನ್ನು ಒಂದನೇ ಎಪಿಸೋಡಿನಿಂದ ಮರುಪ್ರಸಾರ ಮಾಡಲು ಆಗಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಈಗ ತಮ್ಮ ಮಡದಿಯ ಹುಟ್ಟುಹಬ್ಬಕ್ಕೆ ಗೀತಾಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದುವರೆಗೆ ನಾಲ್ಕು ಸಾರಿ ಮರೆತಿದ್ದೇನೆ. ಇನ್ನು ನಾಲ್ಕು ಸಾರಿ ಊರಿನಲ್ಲಿ ಅಥವಾ ದೇಶದಲ್ಲಿ ಇರಲಿಲ್ಲ. ಇನ್ನು ನಾಲ್ಕು ಸಾರಿ ಮರೆಯದಿದ್ದರೂ ಅಸಾಧ್ಯ ಕಷ್ಟಗಳ ಮಧ್ಯೆ ಅದು ಮುಖ್ಯವೆಂದು ಅನ್ನಿಸದೇ ನನ್ನ ಕಷ್ಟಗಳನ್ನೇ ವಿಚಿತ್ರವಾಗಿ ಆನಂದಿಸುತ್ತಾ ಸುಮ್ಮನಾಗಿದ್ದೇನೆ. ಹೆಚ್ಚಿನ ಸಮಯಗಳಲ್ಲಿ ಕಷ್ಟ ಎನ್ನುವುದು ತಾನಾಗೇ ಬಂದಿರಲಿಲ್ಲ. ನನ್ನ ಅವಿವೇಕ, ದೊಡ್ಡತನ ತೋರಿಸಿಕೊಳ್ಳಬೇಕೆನ್ನುವ ನನ್ನ ಸಣ್ಣತನ ಇವುಗಳಿಂದ ಬಂದದ್ದು ಎಂದು ಹೆಂಡತಿಯ ಹುಟ್ಟುಹಬ್ಬದ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಧಾರಾವಾಹಿ, ಸಿನಿಮಾಗಳಲ್ಲಿ ಹೆಂಡತಿಯ ಹುಟ್ಟುಹಬ್ಬ ಮರೆತರೆ ಅದು ಧಾರಾವಾಹಿಗಳಲ್ಲಿ ನಾಲ್ಕು ಎಪಿಸೋಡ್, ಸಿನಿಮಾದಲ್ಲಿ ಆರು ಸೀನುಗಳು ಅಥವಾ ಒಂದು ಹಾಡು. ಆದರೆ ಇಲ್ಲಿ ಅದಕ್ಕಾಗಿ ಅರ್ಧ ಪೇಜಿನ ಡೈಲಾಗ್ ಕೂಡಾ ಇರಲಿಲ್ಲ. ನಾನು ಗೀತಾ ಹುಟ್ಟುಹಬ್ಬ ಮರೆತೆನೆಂದು ಗೀತಾ ಎಂದೂ ನೊಂದುಕೊಂಡಿಲ್ಲ ಅಥವಾ ನೋವಾಗಿದ್ದರೂ ತೋರಿಸಿಕೊಂಡಿಲ್ಲ. ಅಶ್ವಿನಿ ಅಥವಾ ಸತ್ಯ ನೆನಪು ಮಾಡಿದ್ದಾರೆ ಎಂದು ಸೀತಾರಾಮ್ ಹೇಳಿದ್ದಾರೆ.

ನಾನು ಮರೆತಿದ್ದು ಮಾತ್ರವಲ್ಲ, ಹುಟ್ಟುಹಬ್ಬದ ದಿನ ನನ್ನ ಬೇರೆ ಕಷ್ಟಗಳಿಂದಾಗಿ ಕೆಟ್ಟದಾಗಿ ವರ್ತಿಸಿ ಮನೆಯ ವಾತಾವರಣವನ್ನು ಕಹಿಗೊಳಿಸಿದ್ದೂ ಅನೇಕ ಬಾರಿ. ಯಾವುದಕ್ಕೂ ಪ್ರತ್ಯೇಕ ಎಪಿಸೋಡುಗಳಾಗಲೀ, ದೃಶ್ಯಗಳಾಗಲೀ ಇರಲಿಲ್ಲ. ಕೇವಲ ಒಂದು ಪಶ್ಚಾತ್ತಾಪದ ನೋಟ. ಅದೂ ಲಾಂಗ್ ಶಾಟ್ ನಲ್ಲಿ ಎಂದು ಪತ್ನಿಯ ಹುಟ್ಟುಹಬ್ಬದಂದು ಜಗಳವಾಡಿದರೆ ಏನೂ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಗೀತಾ ಹುಟ್ಟು ಹಬ್ಬಕ್ಕೆ ಎಂದೂ ಒಡವೆ ಕೇಳಲಿಲ್ಲ, ಸೀರೆ ಕೇಳಲಿಲ್ಲ. ಗೀತಾ ಕೇಳುವುದು ಒಂದೇ. ದೇವಸ್ಥಾನಕ್ಕೆ ಒಟ್ಟಿಗೇ ಹೋಗಿಬರೋಣ ಎಂದು ಆದರೆ ಈ ಬಾರಿ ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೂ ಹೋಗುವಂತಿಲ್ಲ. ಮನೆ ಕೆಲಸದವರೂ ಬರುತ್ತಿಲ್ಲ, ಕೆಲವು ವರ್ಷಗಳಿಂದ ಬರುತ್ತಿದ್ದ ಅಡುಗೆಯವರೂ ಇಲ್ಲ. ಎಲ್ಲ ಕೆಲಸ ಗೀತಾ ಮೇಲೆ (ಪಾತ್ರೆ ತೊಳೆಯುವುದು ಬಿಟ್ಟು-ಅದನ್ನು ನಾನು ಮಾಡುತ್ತಿದ್ದೇನೆ) ಏನಾದರೂ ಕೊಡಿಸೋಣವೆಂದರೆ ಅಂಗಡಿಗಳೂ ಇಲ್ಲ. ಗೀತಾಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *