ನೆರೆ ಪರಿಹಾರದ ಬಗ್ಗೆ ಮಾತನಾಡಲ್ಲ – ತೇಜಸ್ವಿ ಸೂರ್ಯ ಪಲಾಯನ

ಬೆಂಗಳೂರು: ಬಿಜೆಪಿ ಸಂಸದರಿಗೆ ನೆರೆ ಪರಿಹಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಕಷ್ಟವಾಗುತ್ತಿದೆ. ನೆರೆ ಪರಿಹಾರದ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಪಲಾಯನವಾದ ಮಾಡಿದ್ದಾರೆ.

ಜಯನಗರದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದಾದ ಅವರು, ನಾನು ನೆರೆ ಪರಿಹಾರದ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಜೊತೆ ಫೋನಿನಲ್ಲಿ ಮಾತಾಡಿದ್ದೇವೆ. ಮತ್ತೆ ಅ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಜಾರಿಕೊಂಡರು.

ಇದೇ ವೇಳೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕೆಗೂ ಉತ್ತರಿಸಿದ ತೇಜಸ್ವಿ, ಅವರು ನಮ್ಮ ಹಿರಿಯರು. ಅವರ ಅಭಿಪ್ರಾಯ ಹೇಳಿದ್ದಾರೆ. ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ಜಯನಗರದಲ್ಲಿ ಇಂದು ಗಾಂಧಿ ಸಂಕಲ್ಪ ಪಾದಯಾತ್ರೆ ನಡೆಸಲಾಯ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪಾದಯಾತ್ರೆಗೆ ಚಾಲನೆ ನೀಡಿದರು. ಮೂರು ಬಿಬಿಎಂಪಿ ವಾರ್ಡ್ ಗಳಲ್ಲಿ ನಡೆದ ಅಭಿಯಾನದಲ್ಲಿ ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಸಂಕಲ್ಪ ಮಾಡಲಾಯ್ತು. ಜಯನಗರದ ಜೈನ್ ಕಾಲೇಜಿನಿಂದ ಆರಂಭವಾದ ಪಾದಯಾತ್ರೆಯಲ್ಲಿ ಸಂಸದರು ಸೇರಿದಂತೆ ನೂರಾರು ಯುವಕರು, ಬಿಜೆಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದರು.

ಪಟ್ಟಾಭಿರಾಮ ನಗರ, ಭೈರಸಂದ್ರ ವಾರ್ಡಿನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಾಯ್ತು. ಬಳಿಕ ಮಾತಾನಾಡಿದ ಸಂಸದ ತೇಜಸ್ವಿ ಸೂರ್ಯ, ಪ್ಲಾಸ್ಟಿಕ್ ಮುಕ್ತ ದೇಶ ಮಾಡಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಜನರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *