ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಮಹೀಂದ್ರ ಜೀಪನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರು ಚಲಾಯಿಸಿದ ಯುವಕ ಸ್ಥಳೀಯ ನಿವಾಸಿಯಾಗಿದ್ದು, ತನ್ನ ಇತರೇ ಇಬ್ಬರು ಗೆಳೆಯರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮಹೀಂದ್ರ ಥಾರ್ ಜೀಪ್ ಚಲಾಯಿಸಿಕೊಂಡು ಬಂದಿದ್ದ. ಈ ವೇಳೆ ಜೀಪನ್ನು ನಿಯಂತ್ರಿಸಲು ವಿಫಲವಾಗಿದ್ದು, ರಸ್ತೆಬದಿ ನಿಲ್ಲಿಸಿದ್ದ ಬೈಕಿಗೆ ಡಿಕ್ಕಿ ಹೊಡೆದು ನಂತರ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದೆ. ಆ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನಿಂತಿದೆ.

ಪುಟ್ ಪಾತ್ ಮೇಲೆ ನಡೆದುಹೋಗುತ್ತಿದ್ದ ಮಹಿಳೆಗೆ ಜೀಪ್ ಡಿಕ್ಕಿ ಹೊಡೆದಿದ್ದು, ಕ್ಷಣ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಗಾಯಗೊಂಡ ಶಾಲಾ ವಿದ್ಯಾರ್ಥಿನಿ ತಂದೆಯೊಂದಿಗೆ ಶೂ ಖರೀದಿ ಮಾಡಲು ಆಗಮಿಸಿದ್ದರು. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿನಿ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಅಡಿ ಸಿಕ್ಕ ಸ್ಕೂಟರ್ ನಜ್ಜುಗುಜ್ಜಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಗೂ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೀಪನ್ನು ಸ್ಥಳದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Comments

Leave a Reply

Your email address will not be published. Required fields are marked *