ಕೊರೊನಾದಿಂದ ಟೆಕ್ಕಿ ಕುಟುಂಬ ಪಾರು – ಚಿಕಿತ್ಸೆ ಹೇಗಿತ್ತು? ಏನು ಆಹಾರ ನೀಡಲಾಗುತ್ತಿದೆ?

– ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಟೆಕ್ಕಿ ಕುಟುಂಬ
– ಪ್ರತಿದಿನ ವೈದ್ಯರಿಂದ ಕೌನ್ಸಿಲಿಂಗ್

ಬೆಂಗಳೂರು: ಇಡೀ ಜಗತ್ತೇ ಕೊರೋನಾ ವಿಷವರ್ತುಲದಲ್ಲಿ ಸಿಲುಕಿ ಒದ್ದಾಡುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11 ಆಗಿದೆ. ಆದರೆ ಕರ್ನಾಟಕದ ಮಂದಿಗೆ ಸಿಹಿಸುದ್ದಿ ಸಿಕ್ಕಿದೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ ಬೆಂಗಳೂರಿನ ಕುಟುಂಬ ಕೊರೋನಾ ಜಯಿಸಿದೆ.

ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಸತತ 10 ದಿನಗಳ ಚಿಕಿತ್ಸೆ ಪಡೆದ ಟೆಕ್ಕಿ ಕುಟುಂಬ, ಕೊರೋನಾ ಸೋಂಕಿನಿಂದ ಪಾರಾಗಿದೆ. ಮಾರ್ಚ್ 1ರಂದು ನ್ಯೂಯಾರ್ಕ್-ದುಬೈ ಮೂಲಕ ಬೆಂಗಳೂರಿಗೆ ಬಂದಿದ್ದ ಟೆಕ್ಕಿಯಲ್ಲಿ ಮಾರ್ಚ್ 8ರಂದು ಕೊರೋನಾ ಪಾಸಿಟೀವ್ ಕಂಡುಬಂದಿತ್ತು. ಕೂಡಲೇ ಆತನನ್ನು ಮತ್ತು ಆತನ ಪತ್ನಿ ಮತ್ತು ಪುತ್ರಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆ ಫಲಪ್ರದವಾಗಿದೆ. 20 ತಜ್ಞ ವೈದ್ಯರು, 60 ದಾದಿಯರು ಹಗಲಿರುಳೆನ್ನದೇ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಇದ್ರೊಂದಿಗೆ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 11ರಿಂದ 7ಕ್ಕೆ ಇಳಿದಿದೆ. ಆದ್ರೆ, ಸದ್ಯಕ್ಕೆ ಈ ಮೂವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತಿಲ್ಲ ಇನ್ನೆರಡು ಬಾರಿ ಕೊರೋನಾ ಪರೀಕ್ಷೆ ನಡೆಯಲಿದ್ದು, ಎರಡರಲ್ಲೂ ನೆಗೆಟೀವ್ ಬಂದರೆ ಒಂದು ದಿನ ಅವರ ಮೇಲೆ ನಿಗಾ ಇಟ್ಟು, ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

ಟೆಕ್ಕಿ ಕುಟುಂಬ ಪಾರಾಗಿದ್ದು ಹೇಗೆ?
32 ವರ್ಷದ ಟೆಕ್ಕಿಗೆ ಕೊರೋನಾ ಜೊತೆಗೆ ಬಿಪಿ, ಶುಗರ್ ಇತ್ತು. ರೋಗಿಯ ಗುಣಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಟೆಕ್ಕಿಯ ರೋಗ ಶಮನಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಔಷಧಿಗಳನ್ನು ನೀಡಲಾಗಿತ್ತು. ಇದರ ಜೊತೆ ಮಾನಸಿಕವಾಗಿ ಕುಗ್ಗದಿರಲು ಟೆಕ್ಕಿಗೆ ಪ್ರತಿದಿನ ಕೌನ್ಸೆಲಿಂಗ್ ಮಾಡಲಾಗುತ್ತಿತ್ತು.

ಆಹಾರ ಏನು?
ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಪ್ರತಿ ದಿನ ಬೆಳಗ್ಗೆ ರಾಗಿ ಗಂಜಿ, ಇಡ್ಲಿ/ಪೊಂಗಲ್/ಅವಲಕ್ಕಿ/ ಬ್ರೆಡ್ ನೀಡಲಾಗ್ತಿತ್ತು. ಮಧ್ಯಾಹ್ನ ಮುದ್ದೆ, ಅನ್ನ, ಸೊಪ್ಪು, ತರಕಾರಿ ಸಾರು, 2 ಮೊಟ್ಟೆ, ರಾತ್ರಿ ಊಟಕ್ಕೆ, ಚಪಾತಿ ಪಲ್ಯಗಳನ್ನು ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *