– ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು.!
– ನಿಯಂತ್ರಿತ ವಲಯದಲ್ಲಿ ಸೀಲ್‍ಡೌನ್ ರೂಲ್ಸ್
ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಯಲ್ಲಿ ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು ಮಾಡಿ ರಾಜ್ಯ ಸರ್ಕಾರ ನಿಯಮಗಳ ಆದೇಶ ಹೊರಡಿಸಿದೆ.
ಕೊರೊನಾ ಹಾಟ್‍ಸ್ಪಾಟ್‍ನಲ್ಲಿ ಲಾಕ್‍ಡೌನ್ ಟಫ್ ರೂಲ್ಸ್ ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು ಹಾಟ್‍ಸ್ಪಾಟ್ ಝೋನ್‍ನಲ್ಲಿಯೇ ಮೂರು ವಲಯಗಳನ್ನು ಮಾಡಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹಾಗೂ ವಲಯ ಎಂದು ವಿಂಗಡಿಸಲಾಗಿದ್ದು, ಈ ಮೂಲಕ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.

ನಿಯಂತ್ರಿಯ ವಲಯ:
28 ದಿನಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದರೂ ಅಂತಹ ಪ್ರದೇಶವನ್ನು ನಿಯಂತ್ರಿಯ ವಲಯ ಎಂದು ಗುರುತಿಸಲಾಗುತ್ತದೆ. ಪಾಸಿಟಿವ್ ಇರುವ ವ್ಯಕ್ತಿಯ ನಿವಾಸದ ಮುಂದೆ ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಅಪಾರ್ಟ್‍ಮೆಂಟ್, ಸಂಕೀರ್ಣದಲ್ಲಿ ಒಬ್ಬರಿಗೆ ಕಂಡು ಬಂದ್ರೆ ಇಡೀ ಬ್ಲಾಕ್‍ಗೆ ಗೃಹಬಂಧನ ಹಾಕಲಾಗುತ್ತದೆ. ಪಾಸಿಟಿವ್ ವ್ಯಕ್ತಿಯ ಮನೆ, ಅಪಾರ್ಟ್‍ಮೆಂಟ್ ರಸ್ತೆಯ ನೂರು ಮೀಟರ್‍ಗೆ ದಿಗ್ಭಂದನ ಹೇರಲಾಗುತ್ತದೆ. ಸ್ಲಂ ಆದ್ರೆ ಇಡೀ ಸ್ಲಂಗೆ ಗೃಹಬಂಧನ ಹಾಕಲಾಗುವುದು. ಹಳ್ಳಿಯಲ್ಲಿ ಕೊರೊನಾ ಸೋಂಕು ಕಂಡು ಬಂದ್ರೆ ಸೋಂಕಿತನ ವಾಸ ವ್ಯಾಪ್ತಿಯು ಕಂಪ್ಲೀಟ್ ಸೀಲ್‍ಡೌನ್ ಆಗಲಿದೆ.

ಬಫರ್ ಝೋನ್:
27 ದಿನಗಳಲ್ಲಿ ಹೊಸ ಪ್ರಕರಣ ವರದಿಯಾಗದೇ ಇದ್ದರೆ ಅಥವಾ ಈ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕ ವ್ಯಕ್ತಿಗಳು ಇದ್ದರೆ ಇದನ್ನು ಬಫರ್ ಝೋನ್ ಆಗಿ ಮಾರ್ಪಾಡು ಮಾಡಲಾಗುತ್ತದೆ. ನಗರ ಪ್ರದೇಶದ ಐದು ಕಿ.ಮೀ ವ್ಯಾಪ್ತಿ, ಗ್ರಾಮೀಣ ಭಾಗದ ಏಳು ಕಿ.ಮೀ ವ್ಯಾಪ್ತಿಗೆ ಕಣ್ಗಾವಲು ಇಡಲಾಗುತ್ತದೆ. ಈ ವ್ಯಾಪ್ತಿಯ ಪ್ರತಿ ಮನೆ ಮನೆಗೂ ತಪಾಸಣೆ ನಡೆಸಲಾಗುತ್ತದೆ.
ವಲಯ: ಗುಂಪು ಗುಂಪಾಗಿ ಪ್ರಕರಣ ಕಂಡುಬಂದರೆ ಅದನ್ನು ವಲಯ ಅಂತ ವಿಭಾಗಿಸಿ ಕಣ್ಗಾವಲು ಇಡಲಾಗುತ್ತದೆ.

ಬೆಂಗ್ಳೂರಿನಲ್ಲಿ ಸೀಲ್‍ಡೌನ್ ರೂಲ್ಸ್:
ಕೊರೊನಾ ಸೋಂಕಿತರ ಸಂಖ್ಯೆ ರೆಡ್ ಝೋನ್‍ನಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಬೆಂಗಳೂರಿಗರ ಮೇಲೆ ಮೂರು ಕಣ್ಣು ಕಾಯಲಿದೆ. ಬಿಬಿಎಂಪಿಯಿಂದ ಬಿಕ್ಕಟ್ಟು ನಿರ್ವಹಣಾ ಟೀಂ, ಖಡಕ್ ಪೊಲೀಸರಿಂದ ಲಾಕ್‍ಡೌನ್ ಉಲ್ಲಂಘಿಸಿದರೆ ಮಾರಿ ಹಬ್ಬ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಹೈ ಅಲರ್ಟ್ ಆಗಲಿದ್ದಾರೆ. ಈ ಮೂಲಕ ಮೂರು ಟೀಂ ರಚಿಸಿ ಬೆಂಗಳೂರಿನ ಹಾಟ್‍ಸ್ಪಾಟ್ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ.
ಬೆಂಗ್ಳೂರು ಹಾಟ್‍ಸ್ಪಾಟ್ ಸೀಲ್‍ಡೌನ್ ಹೇಗಿರುತ್ತೆ?
ಬೆಂಗಳೂರಿಗರು ಊಹಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ದೇಶದಲ್ಲಿ ಎಲ್ಲೂ ಇರದ ಟಫ್ ರೂಲ್ಸ್ ಬೆಂಗಳೂರಲ್ಲಿ ಜಾರಿಗೆ ಬರಲಿದೆ. ನಿಯಂತ್ರಿತ ವಲಯದಲ್ಲಿ ಒಂದು ಪ್ರವೇಶ ದ್ವಾರ ಒಂದು ಎಕ್ಸಿಟ್ ಅಷ್ಟೇ ಇರಲಿದೆ. ಪ್ರತಿಯೊಂದು ಖಾಕಿ ಕಣ್ಣಲ್ಲಿ ರಿಜಿಸ್ಟಾರ್ ನೀಡಲಾಗುತ್ತದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ದಿನಸಿ, ಸಿಲಿಂಡರ್, ಔಷಧಿಗೆ ಮಾತ್ರ ಮನೆಯಿಂದ ಹೊರಗೆ ಬರಬಹುದು. ಬೇರೆ ವಾರ್ಡ್‍ನ ಖಾಸಗಿ ವಾಹನಕ್ಕೆ ಮತ್ತೊಂದು ವಾರ್ಡ್‍ನಲ್ಲಿ ಎಂಟ್ರಿ ಇರುವುದಿಲ್ಲ.

ಪೊಲೀಸ್ ಪಾತ್ರ:
ರಾಜ್ಯ ಸರ್ಕಾರವು ಬೆಂಗಳೂರನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಿದ್ದು, ಪೊಲೀಸ್ ನಾಕಾಬಂದಿ ಹಾಕಲಿದೆ. ಎಲ್ಲಾ ಪ್ರವೇಶ ದ್ವಾರಗಳಲ್ಲೂ ಶಾಶ್ವತವಾಗಿ ತಡೆಗೊಡೆ ಹಾಕಿ, ಪೊಲೀಸ್ ನಾಕಾಬಂದಿ ರೂಪಿಸಲಾಗುತ್ತದೆ. ಯಾವುದೇ ವ್ಯಕ್ತಿ ಯಾವುದೇ ಉದ್ದೇಶದಿಂದ ಮನೆಯಿಂದ ಹೊರಬರುವಂತಿಲ್ಲ. ನಿಯಂತ್ರಿತ ವಲಯದಲ್ಲಿ ಒಂದೇ ಒಂದು ನಿರ್ಗಮನ, ಪ್ರವೇಶದ್ವಾರ ಇಲಿದೆ. ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರಿಂದ ಎಮರ್ಜೆನ್ಸಿ ಪಾಸ್ ನೀಡಲಾಗುತ್ತದೆ. ಸೀಲ್‍ಡೌನ್ ಏರಿಯಾದಲ್ಲಿ ಡ್ರೋಣ್ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ.
ಆರೋಗ್ಯ ಇಲಾಖೆ:
ಆರೋಗ್ಯ ಇಲಾಖೆ ಔಟ್-ಪೋಸ್ಟ್ ಆರಂಭಿಸಬೇಕು. ದಿನಕ್ಕೆ ಎರಡು ಬಾರಿ ಜನಸಂಪರ್ಕಗಳ ಪತ್ತೆ ಕಾರ್ಯ ನಡೆಸಬೇಕು. ಜನ ಸಂಪರ್ಕ ನಿಗಾ ಮತ್ತು ಪತ್ತೆ ಕಾರ್ಯವನ್ನ ಶಿಷ್ಟಾಚಾರದ ನಿಯಮದ ಪ್ರಕಾರ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ನಗರಸಭೆ ಅಧಿಕಾರಿಗಳು:
ಸೀಲ್‍ಡೌನ್ ಪ್ರದೇಶದಲ್ಲಿ ಪ್ರತಿನಿತ್ಯ ಸೋಂಕು ನಿವಾರಣೆ ಸ್ಟ್ರೇ ಮಾಡಬೇಕು. ನಗರಸಭೆ ಅಧಿಕಾರಿಗಳು ಸಿಂಪಡಣೆ ಮಾಡಬೇಕು. ಸೀಲ್‍ಡೌನ್ ಏರಿಯಾದಲ್ಲಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರಬರಾಜು ಮಾಡಬೇಕು. ದಿನಸಿ ಪದಾರ್ಥ, ಮಾಂಸ, ಹಾಲು, ಎಲ್‍ಪಿಜಿ, ಅನಿಲ ಮತ್ತು ಔಷಧಿ ಮನೆ ಮನೆಗೆ ಸರಬರಾಜು ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

Leave a Reply