ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ರಾಹುಲ್‍ಗೆ ದೂರು

ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಗುರು-ಶಿಷ್ಯರ ಪ್ರತಿಷ್ಠೆಯ ಫೈಟ್ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ದೂರು ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸಂಪುಟ ಪುನರ್ ರಚನೆಗೆ ಸಿದ್ದರಾಮಯ್ಯ ಕಿರಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಪರಿಸ್ಥಿತಿ ನಿಯಂತ್ರಿಸದಿದ್ದರೆ ಮೈತ್ರಿ ಅಂತ್ಯ ಆಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಮಿತ್ರಪಕ್ಷಗಳ ‘ಹಿತಶತ್ರು’ಗಳನ್ನು ನಿವಾರಿಸಿಕೊಳ್ಳಿ ಎಂದು ದೇವೇಗೌಡರು ರಾಹುಲ್ ಗಾಂಧಿ ಹಾಗೂ ಅಹ್ಮದ್ ಪಟೇಲ್‍ಗೆ ದೂರು ಕೊಟ್ಟಿದ್ದಾರೆ. ಈ ಮೂಲಕ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಅಡ್ಡಗಾಲಾಗಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.

ಜೆಡಿಎಸ್ ಕೋಟಾದ 2 ಸಚಿವ ಸ್ಥಾನ ಪಕ್ಷೇತರರಿಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಹೇಳಿಕೆಗೆ ಗೌಡರು ಕೆಂಡಾಮಂಡಲರಾಗಿದ್ದು, ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್ ಕೋಟಾ ಬಿಟ್ಟುಕೊಡಲ್ಲ. ಜೆಡಿಎಸ್‍ನಿಂದ ಮುಸ್ಲಿಮರು, ದಲಿತರಿಗೆ ಸಚಿವ ಸ್ಥಾನ ಕೊಡಬೇಕು. ಹಾಗಾಗಿ, ಜೆಡಿಎಸ್ ಕೋಟಾ ಬಿಟ್ಟುಕೊಡಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗ್ಗೆಯೂ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿಂದೆ ರಾಹುಲ್‍ಗೆ ಬರೆದಿದ್ದ ಪತ್ರವನ್ನು ನೆನಪಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯ ಸಚಿವ ಸಂಪುಟ ಬುಧವಾರ ವಿಸ್ತರಣೆಯಾಗುವುದಾಗಿ ನಿಗದಿಯಾಗಿತ್ತು. ಆದರೆ ಸೋಮವಾರ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನರಾದ ಹಿನ್ನೆಲೆಯಲ್ಲಿ ಇದೀಗ ಶುಕ್ರವಾರಕ್ಕೆ ಮುಂದೂಡಲಾಗಿದೆ.

Comments

Leave a Reply

Your email address will not be published. Required fields are marked *