ಮಾದಕ ವಸ್ತು ಪೂರೈಕೆ ಜಾಲಗಳ ವಿರುದ್ಧ ಯುದ್ಧ ಘೋಷಣೆ: ಬೊಮ್ಮಾಯಿ

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಹಬ್ಬಿಕೊಂಡಿರುವ ಮಾದಕ ವಸ್ತುಗಳ ಜಾಲಗಳ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಯುದ್ಧ ಸಾರಿದೆ. ಇಂದು ವಿಧಾನಸಭೆ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಜೆ ಜಾರ್ಜ್ ಕೇಳಿದ ಪ್ರಶ್ನೆಗೆ ಸರ್ಕಾರ ಉತ್ತರಿಸಿತ್ತು.

ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಆವರಣದಲ್ಲಿ ಹಾಡು ಹಗಲಲ್ಲೇ ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಕೆಲವು ಪೊಲೀಸರು ಈ ದಂಧೆಯೊಂದಿಗೆ ಕೈ ಜೋಡಿಸಿದ್ದಾರೆ. ಇಂಟರ್ನೆಟ್ ಮೂಲಕವೂ ಮಾದಕ ವಸ್ತುಗಳ ಆನ್‍ಲೈನ್ ಮಾರಾಟ ನಡೆಯುತ್ತಿದೆ. ಕೆಲವು ವ್ಯಕ್ತಿಗಳು ಮಾದಕ ವಸ್ತುಗಳ ಮಾರಾಟವನ್ನೇ ದಂಧೆ ಮಾಡಿಕೊಂಡಿದ್ದಾರೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಮಾಜಿ ಗೃಹ ಸಚಿವ ಕೆ.ಜೆ ಜಾರ್ಜ್ ಅಳಲು ತೋಡಿಕೊಂಡರು. ಕೆ.ಜೆ ಜಾರ್ಜ್ ಪ್ರಶ್ನೆಗೆ ಮಾದಕ ವಸ್ತುಗಳ ಸೇವನೆ ದೊಡ್ಡ ಪಿಡುಗು. ಈ ಪಿಡುಗು ನಿಯಂತ್ರಣಕ್ಕೆ ಕಾಲೇಜು, ಶಿಕ್ಷಣ ಕೇಂದ್ರಗಳಲ್ಲಿ ನಿಗಾ ಇಟ್ಟಿದ್ದೇವೆ. ನಾನಾ ರೀತಿಯಲ್ಲಿ ಮಾದಕ ವಸ್ತುಗಳ ಸೇವನೆ, ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದು ಬಸವರಾಜ್ ಬೊಮ್ಮಾಯಿ ಉತ್ತರ ಕೊಟ್ಟರು.

ಡಾರ್ಕ್ ವೆಬ್, ಪೋಸ್ಟ್ ನಲ್ಲಿ ಪೂರೈಕೆ:
ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಮಾದಕ ವಸ್ತುಗಳ ಪೂರೈಕೆ ಹೇಗೆಲ್ಲ ಆಗುತ್ತಿದೆ ಎಂದು ವಿವರಿಸಿದರು. ದಂಧೆಕೋರರು ನಾನಾ ಹೊಸ ಮಾರ್ಗಗಳ ಮೂಲಕ ಮಾದಕ ವಸ್ತುಗಳ ಪೂರೈಕೆ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಾದಕ ವಸ್ತುಗಳ ಜಾಲದ ಬೇರು ನಿರ್ನಾಮ ಮಾಡಬೇಕಿದೆ. ಡಾರ್ಕ್ ವೆಬ್ ಗಳ ಮೂಲಕ ಮಾದಕ ವಸ್ತುಗಳ ಪೂರೈಕೆ ಆಗ್ತಿದೆ. ಡಾರ್ಕ್ ವೆಬ್‍ಗಳನ್ನು ಅಷ್ಟು ಸುಲಭಕ್ಕೆ ಪತ್ತೆ ಮಾಡೋದು ಕಷ್ಟ. ಆದರೆ ಒಂದು ಡಾರ್ಕ್ ವೆಬ್ ಅನ್ನು ಕರ್ನಾಟಕ ಪೊಲೀಸ್ ಬ್ರೇಕ್ ಮಾಡಿದೆ. ಕಳ್ಳರಿಗಿಂತಲೂ ನಾವು ಒಂದು ಹೆಜ್ಜೆ ಮುಂದೆ ಇದ್ರೇನೇ ಪತ್ತೆ ಹಚ್ಚಲು ಸಾಧ್ಯ. ಇತ್ತೀಚೆಗೆ ಸ್ಪೀಡ್ ಪೋಸ್ಟ್, ಆರ್ಡಿನರಿ ಪೋಸ್ಟ್ ಗಳ ಮೂಲಕವೂ ಮಾದಕ ವಸ್ತುಗಳ ಪೂರೈಕೆ ನಡೀತಿದೆ. ಈ ಸಂಬಂಧ ಇಬ್ಬರು ಅಂಚೆ ನೌಕರರನ್ನು ಬಂಧಿಸಲಾಗಿದೆ. ಇದರ ಇನ್ನಷ್ಟು ತಡೆಗೆ ಕ್ರಮ ಕೈಗೊಳ್ಳಲಾಗ್ತಿದೆ. ಸಿಸಿಬಿಯಿಂದಲೂ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಈಗಾಗಲೇ ಮಾದಕ ವಸ್ತುಗಳ ಪೂರೈಕೆದಾರ ದಂಧೆಕೋರರ ವಿರುದ್ಧ ಹಲವು ಪ್ರಕರಣಗಳು ದಾಖಲಿಸಲಾಗಿದೆ. ಕಳೆದ ವರ್ಷ 1652 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಸವರಾಜ್ ಬೊಮ್ಮಾಯಿಯವರು ಕಲಾಪದಲ್ಲಿ ಉತ್ತರ ನೀಡಿದರು.

ಚಾಕ್ಲೇಟ್, ಸೀಮೆ ಸುಣ್ಣ ಮೊದಲಾದ ರೂಪದಲ್ಲಿ ಸಿಂಥೆಟಿಕ್ ಡ್ರಗ್ ಶಿಕ್ಷಣ ಸಂಸ್ಥೆಗಳಲ್ಲಿ ಮಾರಾಟ ನಡೆಯುತ್ತಿದೆ. ಪೊಲೀಸ್ ಇಲಾಖೆ ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಡ್ರಗ್ ವಿಷಯದಲ್ಲಿ ನಮ್ಮ ಸರ್ಕಾರ ಝೀರೋ ಟಾಲರೆನ್ಸ್ ಹೊಂದಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮಗೆ ಸಹಕರಿಸಬೇಕು ಎಂದು ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

Comments

Leave a Reply

Your email address will not be published. Required fields are marked *