ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

ಹಿರಿಯ ನಟ ಅನಂತ್ ನಾಗ್ ಒಂದು ಸಿನಿಮಾವನ್ನು ಒಪ್ಪಿಕೊಳ್ಳಲು ಅನುಸರಿಸೋ ರೀತಿ ರಿವಾಜುಗಳ ಬಗ್ಗೆ ಚಿತ್ರರಂಗದ ಮಂದಿಗೆ ಸ್ಪಷ್ಟವಾದ ಅಂದಾಜಿರುತ್ತದೆ. ತಮ್ಮ ಪಾತ್ರ ಮಾತ್ರವಲ್ಲ, ಇಡೀ ಕಥೆಯ ಇಂಚಿಂಚನ್ನೂ ಅಳೆದೂ ತೂಗಿದ ನಂತರವಷ್ಟೇ ಅವರು ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅದು ತುಂಬಾ ಕಷ್ಟದ ಕೆಲಸ. ಅಂಥಾದ್ದರಲ್ಲಿ ಸ್ಕ್ರಿಪ್ಟ್ ನೋಡಿಯೇ ಅನಂತ್ ನಾಗ್ ಮೆಚ್ಚಿಕೊಳ್ಳುತ್ತಾರೆಂದರೆ ಅದು ಯಾವ ಚಿತ್ರಕ್ಕಾದರೂ ಗೆಲುವಿನ ಸ್ಪಷ್ಟ ಸೂಚನೆ. ಈ ವಾರ ಬಿಡುಗಡೆಗೆ ಅಣಿಯಾಗಿರುವ ವೀಕೆಂಡ್ ಚಿತ್ರ ಖುದ್ದು ಅನಂತ್ ನಾಗ್ ಅವರಿಂದಲೇ ಮೆಚ್ಚಿಗೆ ಗಳಿಸಿಕೊಂಡಿತ್ತೆಂಬುದು ನಿಜವಾದ ವಿಶೇಷ.

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ, ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಟೆಕ್ಕಿಗಳ ಜಗತ್ತಿನ ಸುತ್ತ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಇದರಲ್ಲಿ ಅನಂತ್ ನಾಗ್ ಟೆಕ್ಕಿಯ ತಾತನಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಎಲ್ಲವನ್ನೂ ನೇರ ನಿಷ್ಠುರವಾಗಿಯೇ ಹೇಳಿ ಬಿಡುವ ಸ್ವಭಾವದ ಅನಂತ್, ವೀಕೆಂಡ್ ಬಗ್ಗೆ ಮಾತ್ರ ಮೆಚ್ಚಿಕೊಂಡು ಭೇಷ್ ಅಂದಿದ್ದಾರೆಂದರೆ ಈ ಚಿತ್ರದ ಬಗ್ಗೆ ಯಾರಿಗಾದರೂ ಒಲವು ಮೂಡದಿರಲು ಸಾಧ್ಯವಿಲ್ಲ.

ಆರಂಭದಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಪಡೆದು ಎರಡೆರಡು ಸಲ ಓದಿಕೊಂಡಿದ್ದ ಅನಂತ್ ನಾಗ್ ಖುಷಿಯಿಂದಲೇ ಡೇಟ್ಸ್ ಕೊಟ್ಟಿದ್ದರಂತೆ. ಜೊತೆಗೆ ಕಥೆ ತುಂಬಾ ಚೆನ್ನಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರಂತೆ. ಬಳಿಕ ಹಿರಿಯರಾಗಿ ಚಿತ್ರತಂಡಕ್ಕೆ ಹುರುಪು ತುಂಬುತ್ತಲೇ ಚಿತ್ರೀಕರಣ ಮುಗಿಸಿಕೊಂಡ ಕ್ಷಣದಲ್ಲಿ ಸ್ಕ್ರಿಪ್ಟ್‍ಗಿಂತಲೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ನಿರ್ದೇಶಕರ ಬೆನ್ತಟ್ಟಿದ್ದರಂತೆ. ಅನಂತ್ ನಾಗ್ ಅವರ ಮೆಚ್ಚುಗೆಯ ಮಾತುಗಳೇ ಈ ಚಿತ್ರದ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ.

ಹೀಗೆ ಆರಂಭಿಕವಾಗಿಯೇ ಅನಂತ್ ನಾಗ್ ಅವರಿಂದ ಮೆಚ್ಚಿಗೆ ಗಳಿಸಿಕೊಂಡಿದ್ದ ವೀಕೆಂಡ್ ಈ ವಾರ ಬಿಡುಗಡೆಗೊಳ್ಳುತ್ತಿದೆ. ಯುವ ಮನಸುಗಳ ವೀಕೆಂಡ್ ಎಂಬ ಆವೇಗದ ಸುತ್ತಾ ಹೊಸೆದಿರೋ ಚೆಂದದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಹಬ್ಬಿಕೊಂಡಿರೋ ಕುತೂಹಲಗಳಿಗೆಲ್ಲ ಈ ವಾರವೇ ಸ್ಪಷ್ಟ ಉತ್ತರ ಸಿಗಲಿದೆ.

Comments

Leave a Reply

Your email address will not be published. Required fields are marked *