ಬೆಂಗಳೂರು: ನೆಲಮಂಗಲ ತಾಲೂಕಿನ ಕಾಚನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ.ಚನ್ನಣ್ಣನವರ್ ಪಾಠ ಹೇಳಿದ್ದಾರೆ.
ಪ್ರಕರಣವೊಂದರ ವಿಚಾರಣೆ ನಿಮಿತ್ತ ರವಿ ಚನ್ನಣ್ಣನವರ್ ಅವರು ಕಾಚನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ಮಧ್ಯೆ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಜೊತೆಗೆ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಪ್ರೋತ್ಸಾಹಿಸಿದ್ದಾರೆ.
ನಾನು ಕೂಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‍ಪಿ ಆಗಿರುವೆ. ವಿದ್ಯೆ ಮನುಷ್ಯನ ಆಸ್ತಿ. ನಿಮ್ಮಲ್ಲಿರುವ ವಸ್ತುಗಳನ್ನು ಯಾರಾದರು ಕದಿಯಬಹುದು. ಆದರೆ ನಿಮ್ಮಲ್ಲಿರುವ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾವಾಗ? ಕರ್ನಾಟಕದ ಮುಖ್ಯಮಂತ್ರಿ ಯಾರು? ಈಗಿನ ಪ್ರಧಾನಿ ಯಾರು? ಸೈನ್ಸ್ ಸ್ಪೆಲ್ಲಿಂಗ್ ಹೇಳಿ. ಸಂವಿಧಾನದ ಶಿಲ್ಪಿ ಯಾರು? ಎಂದು ಏಳನೇ ತರಗತಿ ಮಕ್ಕಳಿಗೆ ಚನ್ನಣ್ಣನವರ್ ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳು ಸರಿಯಾದ ಉತ್ತರ ನೀಡಿದಾಗ ಗುಡ್ ಎಂದು ಪ್ರೋತ್ಸಾಹಿಸಿದರು.
ಶಾಲಾ ಆವರಣದಲ್ಲಿ ಯಾರಾದರೂ ಮದ್ಯ ಸೇವಿಸುತ್ತಾರಾ? ಜೂಜು ಆಡುತ್ತಾರಾ? ಯಾರಾದರೂ ಅಸಭ್ಯವಾಗಿ ನಡೆದುಕೊಳ್ಳುತ್ತಾರಾ ಎಂದು ಮಕ್ಕಳನ್ನು ಪ್ರಶ್ನಿಸಿದರು. ಆಗ ಮಕ್ಕಳು ಇಲ್ಲ ಸರ್ ಎಂದು ಪ್ರತಿಕ್ರಿಯೆ ನೀಡಿದರು. ಮಕ್ಕಳೊಂದಿಗೆ ಮಾತು ಮುಂದುವರಿಸಿದ ಅವರು, ಒಂದು ವೇಳೆ ಅಂತವರು ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ತಮ್ಮ ಮೊಬೈಲ್ ನಂಬರ್ ಅನ್ನು ವಿದ್ಯಾರ್ಥಿಗಳಿಗೆ ಕೊಟ್ಟರು.
https://www.youtube.com/watch?v=qf4tToZBvws

Leave a Reply