ಸಾರಥಿ ಹೆಗಲ ಮೇಲೆ ಕುಳಿತ ಪುಟ್ಟ ರಾಮನ ಪರಿಚಯಿಸಿದ ತರುಣ್ ಸುಧೀರ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಜೈಶ್ರೀರಾಮ್ ಹಾಡಿನಲ್ಲಿ ಕಾಣಿಸಿಕೊಂಡ ಪುಟ್ಟ ರಾಮನನ್ನು ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಪರಿಚಯ ಮಾಡಿಕೊಟ್ಟಿದ್ದಾರೆ.

ತರುಣ್ ಸುಧೀರ್ ನಿರ್ದೇಶನ ಮತ್ತು ಡಿಬಾಸ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮುಂದಿನ ಏಪ್ರಿಲ್‍ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಹಿಂದೆ ಚಿತ್ರತಂಡ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ದರ್ಶನ್ ಅವರ ಜೊತೆ ಪುಟ್ಟ ರಾಮನೊಬ್ಬ ಕಾಣಿಸಿಕೊಂಡಿದ್ದನು.

ಈ ವಿಚಾರವಾಗಿ ದರ್ಶನ್ ಅವರ ಜೊತೆಯಲ್ಲಿ ನಿಂತಿರುವ ಪುಟ್ಟ ರಾಮನ ಫೋಟೋ ಟ್ವೀಟ್ ಮಾಡಿರುವ ತರುಣ್, ಈ ಹಿಂದೆ ನಮ್ಮ ರಾಬರ್ಟ್ ಸಿನಿಮಾದ ಪೋಸ್ಟರ್, ಮತ್ತು ಹಾಡುಗಳಲ್ಲಿ ಕಾಣಿಸಿಕೊಂಡ ಪುಟ್ಟ ರಾಮ ಇವರೆ. ಜೇಸನ್ ತುಂಬ ಪ್ರತಿಭಾವಂತ ಬಾಲಕ ನಮ್ಮ ರಾಬರ್ಟ್ ಸಿನಿಮಾದಲ್ಲಿ ಬಹುಮುಖ್ಯ ಪಾತ್ರವಹಿಸಿಲಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಯಾರು ಈ ಜೇಸನ್?
ಮುಂಬೈ ಮೂಲದ ಈ ಜೇಸನ್‍ಗೆ ಇನ್ನೂ 10 ವರ್ಷ, ಬಾಲಿವುಡ್‍ನಲ್ಲಿ ಹಲವಾರು ಸಿನಿಮಾ ಮತ್ತು ಜಾಹೀರಾತಿನಲ್ಲಿ ನಟಿಸಿದ್ದಾನೆ. ಇವರ ತಂದೆ ಮುಂಬೈನಲ್ಲಿ ಉದ್ಯಮಿಯಾಗಿದ್ದು, ಈ ಪುಟ್ಟ ಬಾಲಕ ಬಾಲಿವುಡ್‍ನ ಕಿಂಗ್‍ಖಾನ್ ಶಾರೂಕ್ ಖಾನ್ ಮತ್ತು ಕಿಲಾಡಿ ಅಕ್ಷಯ್ ಕುಮಾರ್ ಅವರ ಜೊತೆ ನಟಿಸಿ ಸೈ ಅನಿಸಿಕೊಂಡಿದ್ದಾನೆ. ಈಗ ರಾಬರ್ಟ್‍ನಲ್ಲಿ ಪುಟ್ಟ ರಾಮನಾಗಿ ಕಾಣಿಸಿಕೊಳ್ಳಲಿದ್ದಾನೆ.

ರಾಬರ್ಟ್ ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ. ಬಾ, ಬಾ, ಬಾ, ನಾ ರೆಡಿ ಮತ್ತು ಜೈಶ್ರೀರಾಮ್ ಎಂಬ ಹಾಡುಗಳು ರಿಲೀಸ್ ಆಗಿ ಯೂಟ್ಯೂಬ್‍ನಲ್ಲಿ ದಾಖಲೆ ಬರೆದಿವೆ. ಈಗ ಚಿತ್ರತಂಡ ದೋಸ್ತಾ ಕಣೋ ಎಂಬ ಚಿತ್ರದ ಮೂರನೇ ಸಾಂಗ್ ಅನ್ನು ಬಿಡುಗಡೆ ಮಾಡಲು ಸಿದ್ಧಮಾಡಿಕೊಳ್ಳುತ್ತಿದೆ. ಈ ಹಾಡು ನಾಳೆ ಬೆಳಗ್ಗೆ 11 ಗಂಟೆ 4 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂದು ಸ್ವತಃ ದರ್ಶನ್ ಅವರೇ ಟ್ವೀಟ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂಬ ಮೂರು ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಿನ್ನೆಲೆ ಸಂಗೀತ ನೀಡಿದ್ದಾರೆ.

Comments

Leave a Reply

Your email address will not be published. Required fields are marked *