ಕೆಲ ಅನರ್ಹ ಶಾಸಕರಿಂದ ಉತ್ತರಾಧಿಕಾರಿಗಳನ್ನು ಅಖಾಡಕ್ಕಿಳಿಸಲು ಸಿದ್ಧತೆ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಸರ್ಕಾರ ಉರುಳಿದವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ.

ಕೋರ್ಟಿನಲ್ಲಿ ತಮ್ಮ ರಾಜಕೀಯ ಭವಿಷ್ಯದ ತೀರ್ಪು ಪ್ರಕಟವಾಗಬೇಕಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತಮ್ಮದೇ ಆದ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಒಂದು ವೇಳೆ ಕೋರ್ಟಿನಲ್ಲಿ ಹಿನ್ನಡೆಯಾದರೆ ಕೆಲವು ಶಾಸಕರು ತಮ್ಮ ಉತ್ತರಾಧಿಕಾರಿಗಳನ್ನು ಅಖಾಡಕ್ಕೆ ಇಳಿಸುವ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಕೆಲವರು ಚುನಾವಣಾ ರಾಜಕಾರಣದ ಸಹವಾಸವೇ ಬೇಡ ಎಂದು ನಿವೃತ್ತಿಯ ಚಿಂತನೆ ನಡೆಸಿದ್ದಾರೆ. ಮತ್ತೆ ಕೆಲವರು ನ್ಯಾಯಾಲಯದ ತೀರ್ಪು ನೋಡಿ ಮುಂದಿನ ತೀರ್ಮಾನ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಕೆಲವು ಅನರ್ಹ ಶಾಸಕರುಗಳು ಅನಿವಾರ್ಯ ಪರಿಸ್ಥಿತಿ ಎದುರಾದರೆ ತಮ್ಮ ಉತ್ತರಾಧಿಕಾರಿಗಳನ್ನ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದಾರೆ. ತಮ್ಮ ಉತ್ತರಾಧಿಕಾರಿ ಮುಂದೆ ಕೂಡ ತಮ್ಮ ಮಾತು ಕೇಳಬೇಕು. ಇಲ್ಲ ತಾವು ಬಯಸಿದಾಗ ತಮಗೆ ಅವಕಾಶ ಮಾಡಿಕೊಡಬೇಕು ಅಂತವರನ್ನೇ ಉತ್ತರಾಧಿಕಾರಿಯಾಗಿ ಚುನಾವಣಾ ಅಖಾಡಕ್ಕೆ ಇಳಿಸಲು ಮುಂದಾಗಿದ್ದಾರೆ.

17 ಅನರ್ಹ ಶಾಸಕರ ಪೈಕಿ 13 ಜನ ತಮ್ಮ ಉತ್ತಾರಧಿಕಾರಿಗಳನ್ನ ಈಗಾಗಲೇ ಗುರುತಿಸಿದ್ದಾರೆ. ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಬಂದರೆ ತಮ್ಮ ಪರವಾಗಿ ತಮ್ಮ ಉತ್ತರಾಧಿಕಾರಿಗಳನ್ನ ಚುನಾವಣಾ ಅಖಾಡಕ್ಕೆ ಇಳಿಸೋದು ಅವರ ಪ್ಲಾನ್ ಆಗಿದೆ. ಅದರಲ್ಲಿ ಮೂವರು ಶಾಸಕರು ತಮ್ಮ ಪತ್ನಿಯರನ್ನೇ ತಮ್ಮ ಉತ್ತರಾಧಿಕಾರಿಗಳಾಗಿ ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅಥಣಿ ಶಾಸಕ ಮಹೇಶ್ ಕುಮುಟಳ್ಳಿ ತಮ್ಮ ಸಹೋದರನನ್ನ ಅಖಾಡಕ್ಕೆ ಇಳಿಸಿದರೆ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ತಮ್ಮ ತಂದೆಯನ್ನೇ ಅಖಾಡಕ್ಕೆ ಇಳಿಸೋದು ಪಕ್ಕಾ ಆಗಿದೆ. 6 ಜನ ಅನರ್ಹ ಶಾಸಕರು ತಮ್ಮ ಮಕ್ಕಳನ್ನ ಉತ್ತರಾಧಿಕಾರಿಯಾಗಿ ಸಿದ್ಧಪಡಿಸಿದ್ದು, 5 ಶಾಸಕರ ಗಂಡು ಮಕ್ಕಳು ಹಾಗೂ ಬಿ.ಸಿ.ಪಾಟೀಲ್ ಮಗಳನ್ನ ಉತ್ತರಾಧಿಕಾರಿಯಾಗಿ ಅಖಾಡಕ್ಕೆ ಇಳಿಸಲು ಸಜ್ಜಾಗಿದ್ದಾರೆ.

ರೆಬೆಲ್ ನಾಯಕ ರಮೇಶ್ ಜಾರಕಿಹೋಳಿ ಅಳಿಯನನ್ನ ಉತ್ತರಾಧಿಕಾರಿ ಮಾಡಲು ಮುಂದಾದರೆ, ಆನಂದ್ ಸಿಂಗ್ ಮಗ ಅಥವಾ ಅಳಿಯ ಇಬ್ಬರಲ್ಲಿ ಒಬ್ಬರನ್ನು ಅಖಾಡಕ್ಕೆ ಇಳಿಸಲು ರೆಡಿಯಾಗಿದ್ದಾರೆ. 17 ರಲ್ಲಿ 13 ಜನ ಅನರ್ಹ ಶಾಸಕರು ಉತ್ತರಾಧಿಕಾರಿಗಳನ್ನ ಸಿದ್ಧಪಡಿಸಿಕೊಂಡಿದ್ದಾರೆ. ಉಳಿದ ನಾಲ್ವರಲ್ಲಿ ಇಬ್ಬರು ಚುನಾವಣಾ ಅಖಾಡದಿಂದಲೆ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ.ಉಳಿದ ಇಬ್ಬರು ಯತ್ತರಾಧಿಕಾರಿ ಆಯ್ಕೆ ಮಾಡದೆ ನ್ಯಾಯಾಲಯದ ತೀರ್ಪಿಗಾಗಿ ಕಾಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

17 ಅನರ್ಹ ಶಾಸಕರ ಪೈಕಿ ಎಚ್ ವಿಶ್ವನಾಥ್ ಹಾಗೂ ನಾರಾಯಣ ಗೌಡ ರಾಜಕಾರದಿಂದಲೇ ನಿವೃತ್ತರಾಗಲು ತೀರ್ಮಾನಿಸಿದ್ರೆ, ಮುನಿರತ್ನ ಹಾಗೂ ಆರ್ ಶಂಕರ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ ಉಳಿದ 13 ಜನ ಅನರ್ಹರು ಮಾತ್ರ ತಮ್ಮ ಉತ್ತರಾಧಿಕಾರಿಗಳನ್ನ ಈಗಾಗಲೇ ಸಿದ್ಧಪಡಿಸಿಕೊಂಡಿದ್ದು ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *