ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿದ್ಯುತ್ ಶಾಕ್‍ನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದೆ.

ಕೆ.ಆರ್.ಪುರ ಆರ್.ಎಂ.ಎಸ್ ಬಡಾವಣೆಯ ಮನೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಮೀನಮ್ಮ ಎಂದು ಗುರುತಿಸಲಾಗಿದೆ. ಮನೆಗೆ ನೀರು ನುಗ್ಗಿದ ಸಂದರ್ಭದಲ್ಲಿ ಯುಪಿಎಸ್ ಸ್ವಿಚ್ ಆಫ್ ಮಾಡಲು ಹೋದಾಗ ಘಟನೆ ನಡೆದಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ಬಿ.ಎ.ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

ಕೊಚ್ಚಿ ಹೋದ ಅಂಗಡಿಗಳು: ಭಾರೀ ಮಳೆಯಿಂದ ನೆಲಮಂಗಲ ತಾಲೂಕಿನ ಅಮಾನಿಕೆರೆ, ಬಿನ್ನಮಂಗಲ, ದಾಸನಪುರ ಕರೆಗೆಗಳು ಭರ್ತಿಯಾಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯ ಮೇಲೆ ಸುಮಾರು ಮೂರು ಅಡಿ ನೀರು ನಿಂತಿದ್ದು, ನೀರಿನ ರಭಸಕ್ಕೆ ಹಲವು ಅಂಗಡಿಗಳು ಕೊಚ್ಚಿ ಹೋಗಿವೆ. ರಸ್ತೆ ದಾಟಲಾಗದೆ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳೀಯ ಜನರು ತೆರವು ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ.

ಗೋಡೆ ಕುಸಿತ: ಮಳೆಯ ಅರ್ಭಟಕ್ಕೆ ನೆಲಮಂಗಲ ಸಮೀಪದ ಹಿಮಾಲಯ ಡ್ರಗ್ ಕಂಪನಿಯ ಒಳ ಕಾಂಪೌಂಡ್ ಕುಸಿತವಾಗಿದೆ. ಬಿನ್ನಮಂಗಲ ಕೆರೆ ಕೋಡಿ ಒಡೆದ ಪರಿಣಾಮ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಿಂದ ಕಂಪನಿಯ ಒಳಗೆ ನೀರು ಹರಿದುಬಂದಿದೆ. ಕಂಪನಿಯ ಕೆಲವು ಸ್ಥಳಗಳು ಜಲಾವೃತಗೊಂಡಿದೆ.

Comments

Leave a Reply

Your email address will not be published. Required fields are marked *