ಶೀಘ್ರವೇ ರಾಜ್ಯದ ಜನತೆಗೆ ವಿದ್ಯುತ್ ದರ ಹೆಚ್ಚಳದ ಶಾಕ್

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ವಿದ್ಯುತ್ ಸಂಪರ್ಕಕ್ಕೆ ಏಪ್ರಿಲ್ ನಿಂದ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಅಯೋಗಕ್ಕೆ (ಕೆಇಆರ್‍ಸಿ) ಪ್ರಸ್ತಾವನೆ ಸಲ್ಲಿಸಿದೆ.

ಪ್ರತಿಯೊಂದು ಯೂನಿಟ್ ಗೆ 1.ರೂ. ನಿಂದ 2.20 ರೂ.ವರೆಗೆ ವಿದ್ಯುತ್ ದರ ಏರಿಕೆ ಮಾಡಲು ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್‍ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಕಡಿಮೆ ವಿದ್ಯುತ್ ಬಳಕೆ ಮಾಡುವ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಗೃಹ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗದಂತೆ ಪ್ರಸ್ತಾವನೆ ಸಲ್ಲಿಸಿವೆ. ಕೃಷಿ ಪಂಪ್ ಸೆಟ್ ಗಳಿಗೆ ಭಾರೀ ಪ್ರಮಾಣದಲ್ಲಿ ವಿದ್ಯುತ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ.

ಪ್ರತಿ ವಿದ್ಯುತ್ ಸರಬರಾಜು ಕಂಪನಿಯೂ ಗೃಹ ಬಳಕೆಗೆ ಗ್ರಾಹಕರು, ಸರ್ಕಾರಿ ವಿದ್ಯಾ ಸಂಸ್ಥೆಗಳು ಹಾಗೂ ಆಸ್ಪತ್ರೆ ಸ್ಥಾವರಗಳಿಗೆ ಒಂದು ದರ ಹಾಗೂ ಕೈಗಾರಿಕಾ, ವಾಣಿಜ್ಯ, ಎಚ್ ಟಿ ವಾಣಿಜ್ಯ ಬಳಕೆದಾರರಿಗೆ ಪ್ರತ್ಯೇಕವಾಗಿ ದರ ಏರಿಕೆಗೆ ಪ್ರಸ್ತಾಪ ಸಲ್ಲಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳ ದರ ಏರಿಕೆಗೆ ಪರಿಶೀಲನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸಿ ಸದ್ಯದಲ್ಲಿಯೇ ವಿದ್ಯುತ್ ದರ ಏರಿಕೆ ಮಾಡಲಿವೆ.

ಪ್ರತಿ ಯೂನಿಟ್‍ಗೆ 1.90 ರೂ. ಹೆಚ್ಚಳ?
ಬೆಸ್ಕಾಂ ಕೆಇಆರ್‍ಸಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 3018-19 ನೇ ಸಾಲಿನಲ್ಲಿ ಬೆಸ್ಕಾಂಗೆ 2,224 ಕೋಟಿ ರೂ.ಆದಾಯ ಕೊರತೆ ಉಂಟಾಗಿತ್ತು. ಹೀಗಾಗಿ ಎಲ್ಲಾ ವಲಯಗಳಲ್ಲಿ ಪ್ರತಿ ಯೂನಿಟ್‍ಗೆ 1.96 ರೂ.ಗಳಂತೆ ವಿದ್ಯುತ್ ದರ ಹೆಚ್ಚಳ ಮಾಡಲು ಪ್ರಸ್ತಾಪ ಸಲ್ಲಿಸಿದೆ.

ಬೆಸ್ಕಾಂ ಮಾತ್ರವಲ್ಲದೇ ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ ಜೆಸ್ಕಾಂ ವಿದ್ಯುತ್ ಸರಬರಾಜು ಕಂಪನಿಗಳಿಗೂ ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 0.50 ರೂ.ಗಳಿಂದ 2.00 ರೂ.ವರೆಗೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *