ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ- ಆರೋಪಿ ಕೋರ್ಟ್ ಗೆ ಹಾಜರ್

– ನನಗೆ ಇವತ್ತೇ ಶಿಕ್ಷೆ ಕೊಟ್ಟುಬಿಡಿ – ಎಟಿಎಂ ಹಲ್ಲೆಕೋರ ಮನವಿ
– ನನ್ನ ಪರ ವಾದ ಮಂಡಿಸಲು ಯಾವ ವಕೀಲರು ಬೇಡಾ ಎಂದ ಆರೋಪಿ

ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿ ಮಧುಕರ್ ರೆಡ್ಡಿಯನ್ನು ಎಸ್.ಜೆ.ಪಾರ್ಕ್ ಪೊಲೀಸರು ಇಂದು ಕೋರ್ಟ್ ಗೆ ಹಾಜರಿಪಡಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ಮಧುಕರ್ ರೆಡ್ಡಿ ವಿರುದ್ಧ ದೋಷಾರೋಪಣೆ ಹೊರೆಸಲು ಇಂದು ಸಿಸಿಎಚ್ 65 ಕೋರ್ಟ್ ಗೆ ಕರೆತರಲಾಗಿತ್ತು. ಈ ಮೂಲಕ ಚಾರ್ಚ್ ಶೀಟ್ ಸಲ್ಲಿಸಿದ ನಂತರ ಮೊದಲ ಬಾರಿಗೆ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪ್ರಕರಣದ ಕುರಿತು ನ್ಯಾಯಾಧೀಶರಾದ ರಾಜೇಶ್ವರ ವಿಚಾರಣೆ ನಡೆಸಿದರು.

ನಾನು ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿರುವುದು ಸತ್ಯ. ತಪ್ಪು ಒಪ್ಪಿಕೊಳ್ಳುತ್ತೇನೆ. ನನ್ನ ಪರ ವಾದ ಮಂಡಿಸಲು ಯಾವ ವಕೀಲರೂ ಬೇಡ ಹಾಗೂ ವಿಚಾರಣೆಯೂ ಬೇಡ. ಮದನಪಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ಈಗ ಇಲ್ಲಿ ಕೂಡ ಶಿಕ್ಷೆ ಅನುಭವಿಸುತ್ತೇನೆ. ನನಗೆ ಹೆಂಡತಿ ಮಕ್ಕಳು ಇದ್ದಾರೆ ಬಿಡುಗಡೆಯಾಗಬೇಕು. ಇವತ್ತೆ ಶಿಕ್ಷೆ ನೀಡಿ ಎಂದು ಮಧುಕರ್ ರೆಡ್ಡಿ ನ್ಯಾಯಾಧೀಶರಿಗೆ ಬೇಡಿಕೊಂಡಿದ್ದಾನೆ.

ಮಧುಕರ್ ರೆಡ್ಡಿ ಮನವಿಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ನಿಮ್ಮ ಮೇಲಿರುವ ಆರೋಪಕ್ಕೆ ಜೀವಾವಧಿ ಶಿಕ್ಷೆ ಇದೆ. ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಶಿಕ್ಷೆ ಕಡಿಮೆ ಆಗುತ್ತೆ ಅನ್ನೋದು ಗೊತ್ತಿಲ್ಲ. ನಿಮಗೆ ವಕೀಲರನ್ನು ನೇಮಕ ಮಾಡಲಾಗಿದೆ. ಅವರ ಜೊತೆಗೆ ಚರ್ಚಿಸಿ ತಿಳಿಸಿ ಎಂದು ಸೂಚನೆ ನೀಡಿದರು.

ಏನಿದು ಪ್ರಕರಣ?:
ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬವರು 2013, ನವೆಂಬರ್ 19ರಂದು ಹಣ ಪಡೆಯುತ್ತಿದ್ದರು. ಈ ವೇಳೆ ಜ್ಯೋತಿ ಉದಯ್ ಅವರ ಮೇಲೆ ಆಂಧ್ರ ಪ್ರದೇಶ ಮೂಲದ ಮಧುಕರ್ ರೆಡ್ಡಿ ಮಾರಣಾಂತಿಕ ಹಲ್ಲೆ ಮಾಡಿ, ಹಣ ಕಿತ್ತುಕೊಂಡು ಪರಾರಿಯಾಗಿದ್ದ. ಎಟಿಎಂ ಕೇಂದ್ರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಕೃತ್ಯ ಸೆರೆಯಾಗಿತ್ತು. ಕರ್ನಾಟಕ ಅಷ್ಟೇ ಅಲ್ಲದೆ ಆಂಧ್ರ ಪ್ರದೇಶದಲ್ಲಿ ನಾಲ್ಕು ಪ್ರಕರಣ ಹಾಗೂ ಕೇರಳದಲ್ಲಿ ಎರಡು ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.

ಎಲ್ಲೆಲ್ಲಿ ಅಪರಾಧಗಳು:
ಆಂಧ್ರ ಪ್ರದೇಶ:
> 2005 ರ ಆನಂದ ರೆಡ್ಡಿ ಕೊಲೆ ಪ್ರಕರಣ ( ನೀರಿನ ವಿಚಾರಕ್ಕೆ ಬಾಂಬ್ ಇಟ್ಟು ಕೊಲೆ ಮಾಡಿದ್ದ)
> 2011ರಲ್ಲಿ ಕಡಪ ಜೈಲಿನಿಂದ ಎಸ್ಕೇಪ್ ಆಗಿದ್ದ ಪ್ರಕರಣ
> 2013, ನ. 10 ಧರ್ಮಾವರಂ ಕೊಲೆ ಪ್ರಕರಣ ( ಪ್ರಮೀಳಮ್ಮ)
> ಹೈದ್ರಾಬಾದ್ ಮತ್ತು ಗುಂಟೂರಿನಲ್ಲಿ ಕೊಲೆ ಯತ್ನ ಪ್ರಕರಣಗಳು

ಕರ್ನಾಟಕ:
> 2013, ನ.19 ರಂದು ಎಟಿಎಂನಲ್ಲಿ ಜ್ಯೋತಿ ಉದಯ್ ಕೊಲೆ ಯತ್ನ ಪ್ರಕರಣ

ಕೇರಳ:
> ಎರ್ನಾಕುಲಂನಲ್ಲಿ ನಡೆದ ಎರಡು ಸರ ಅಪಹರಣ ಪ್ರಕರಣ
> ಎಟಿಎಂನಲ್ಲಿ ನಡೆದ ಕೊಲೆ ಯತ್ನ ಪ್ರಕರಣ

https://youtu.be/RXXpBObVE1Q

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *