ಬೆಂಗ್ಳೂರಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದ ರೌಡಿಗೆ ಪೊಲೀಸರಿಂದ ಗುಂಡು

ಬೆಂಗಳೂರು: ಕೊಲೆ, ದರೋಡೆ, ರಾಬರಿ ಮಾಡಿ ಜನರನ್ನು ಬೆದರಿಸಿಕೊಂಡು ಬೆಂಗಳೂರಿನಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದ ರೌಡಿ ಮೇಲೆ ಪೊಲೀಸರು ಗುಂಡು ಹಾರಿಸಿ ಉರುಳಿಸಿದ್ದಾರೆ.

ದಿನೇಶ್ ಗುಂಡೇಟು ತಿಂದ ರೌಡಿಶೀಟರ್. ಈತ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಕೊಲೆ, ದರೋಡೆ ಮಾಡಿ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದನು. ಬುಧವಾರ ರಾತ್ರಿ ಬಾಣಸವಾಡಿ ರೈಲ್ವೇ ಪ್ಯಾರಲಲ್ ಬಳಿ ಇರುವ ಮಾಹಿತಿ ತಿಳಿದು ಪೊಲೀಸರು ಬಂಧಿಸಲು ಹೋಗಿದ್ದರು.

ಈ ವೇಳೆ ರೌಡಿ ದಿನೇಶ್, ಚಾಕುವಿನಿಂದ ಪೇದೆ ಧರ್ಮೇಶ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಎಸಿಪಿ ಮಹದೇವಪ್ಪ ಅವರು ಆರೋಪಿ ದಿನೇಶ್‍ಗೆ ಶರಣಾಗಲು ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಈ ವೇಳೆ ಆತ ಮತ್ತೆ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಉರುಳಿಸಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.

ಆರೋಪಿ ದಿನೇಶ್ ನಟೋರಿಯಸ್ ಆಗಿದ್ದು, ಕಳೆದ ಎರಡೂವರೆ ವರ್ಷದಿಂದ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆರೋಪಿ ದಿನೇಶ್ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಕೊಲೆಗಳನ್ನ ಮಾಡಿದ್ದಾನೆ. ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೇಸ್‍ಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *