ಸಂಜಯ್ ನಗರ ಠಾಣೆ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್

– ಏನ್ಮಾಡ್ತಿದ್ದೀರ ನೀವೆಲ್ಲಾ? ಕ್ರೈಂ ಸಿಬ್ಬಂದಿ ಏನ್ ಕೆಲಸ ಮಾಡ್ತಿದ್ದೀರಾ?
– ಸಿಬ್ಬಂದಿಯ ಚಳಿ ಬಿಡಿಸಿದ ಪೊಲೀಸ್ ಆಯುಕ್ತರು

ಬೆಂಗಳೂರು: ಸಂಜಯ್ ನಗರ ಪೊಲೀಸ್ ಠಾಣೆಗೆ ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಂಜಯ್ ನಗರ ಠಾಣೆಯಲ್ಲಿ ಬರೋಬ್ಬರಿ 9 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ತಿಂಗಳಿಂದ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರು ಠಾಣೆಯ ಭೇಟಿ ನೀಡಿ, ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

ಏನ್ಮಾಡ್ತಿದ್ದೀರ ನೀವೆಲ್ಲಾ? ಕ್ರೈಂ ಸಿಬ್ಬಂದಿ ಏನ್ ಕೆಲಸ ಮಾಡ್ತಿದ್ದೀರಾ? ಇಷ್ಟೊಂದು ಪ್ರಕರಣಗಳು ನಡೆದರೂ ಆರಾಮಾಗಿ ಇದ್ದೀರಾ. ಆರೋಪಿಗಳ ಬಂಧನ ಯಾಕೆ ಆಗಿಲ್ಲ ಎಂದು ಚಳಿ ಬಿಡಿಸಿದರು.

ಜೆಡಬ್ಲ್ಯು ಮ್ಯಾರಿಯೇಟ್ ಮಾಲೀಕ ದೀಪಕ್ ರಹೇಜ ಮತ್ತು ಪುತ್ರ ಆದಿತ್ಯ ರಹೇಜ ರಕ್ಷಣೆಗೆ ಸಂಜಯ್‍ನಗರ ಪೊಲೀಸರು ನಿಂತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 2014ರಲ್ಲಿ ಈ ಸಂಬಂಧ ವಂಚನೆ ಪ್ರಕರಣ ದಾಖಲಾಗಿತ್ತು. ಅಪ್ಪ-ಮಗ ಸೇರಿ ಸಾರ್ವಜನಿಕರಿಗೆ ಒಂದು ಕೋಟಿ ವಂಚನೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಇಬ್ಬರನ್ನೂ ಬಂಧಿಸಿಲ್ಲ. ಸಾಕಷ್ಟು ಬಾರಿ ವಾರೆಂಟ್ ಜಾರಿಯಾದರೂ ಬಂಧನವಾಗಿಲ್ಲ ಎಂದು ಗುಡುಗಿದರು.

ಉಮೇಶ್ ನೋಡಿ ಇದು ಸರಿಯಾಗಿ ತನಿಖೆಯಾಗಬೇಕು. ಕೋರ್ಟ್ ನಿಂದ ಉದ್ಘೋಷಿತ ಅಪರಾಧಿ ಅಂತ ಸೂಚಿಸಿದರೂ ಆರೋಪಿಗಳನ್ನು ಹಿಡಿದಿಲ್ಲ. ಯಾರ್ಯಾರು ಸಿಬ್ಬಂದಿ ಜೆಡಬ್ಲ್ಯು ಮ್ಯಾರಿಯೇಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದರು.

ಈ ವೇಳೆ ಅಲೋಕ್ ಕುಮಾರ್ ಅವರು, ಸಂಜಯನಗರ ಮೋಸ್ಟ್ ವಾಂಟೆಡ್ ರೌಡಿ ಯಾರು ಎಂದು ಪ್ರಶ್ನಿಸಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಂಜಯ್‍ನಗರ ಸಿಬ್ಬಂದಿ, ಶರಣಪ್ಪ ಸರ್ ಅಂತ ಉತ್ತರಿಸಿದರು. ಆಗ ಅಲೋಕ್ ಕುಮಾರ್ ಅವರು, ಯಾರಪ್ಪ ನೀನು? ದೊಡ್ಡ ರೌಡಿಯಾ? ಯಾವ ಊರು, ಸಂಜಯ್‍ನಗರದ ದಾದಾ ಆಗ್ಬೇಕಾ ನೀನು, ಎಷ್ಟು ವಯಸ್ಸು ಎಂದು ರೌಡಿ ಶರಣಪ್ಪಗೆ ಕೇಳಿದರು.

ಅಲೋಕ್ ಕುಮಾರ್ ಅವರ ಖಡಕ್ ಪ್ರಶ್ನೆಗಳಿಗೆ ನಡುಗುತ್ತಲೇ ಉತ್ತರ ನೀಡಿದ ರೌಡಿ ಶರಣಪ್ಪ, ಸರ್ ನಾನು ಗುಲ್ಬರ್ಗ ಮೂಲದವನು. ಆಟೋ ಓಡಿಸುತ್ತಿದ್ದೇನೆ, 19 ವಯಸ್ಸು ಸರ್ ಎಂದು ಹೇಳಿದ. ಆಗ ಅಲೋಕ್ ಕುಮಾರ್ ಅವರು, ನಾನು ಗುಲ್ಬರ್ಗದಲ್ಲಿ ಕೆಲಸ ಮಾಡಿದ್ದೇನೆ. ಒಳ್ಳೆ ರೀತಿ ಬದುಕಿ. ಇಲ್ಲ ಗೊತ್ತಲ್ಲ ಎಂದು ರೌಡಿಶೀಟರ್ ಗೆ ವಾರ್ನಿಂಗ್ ಕೊಟ್ಟರು. ಬಳಿಕ, ಇವನನ್ನ ಕರ್ಕೊಂಡ್ ಹೋಗಿ ಕಟಿಂಗ್ ಶೇವಿಂಗ್ ಮಾಡಿಸಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

Comments

Leave a Reply

Your email address will not be published. Required fields are marked *