ಗೂಂಡಾ ಕಾಯ್ದೆ ಅಡಿ ಅರೆಸ್ಟ್ – ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್‌ಗಳು

ಬೆಂಗಳೂರು: ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಇಬ್ಬರು ರೌಡಿಶೀಟರ್‌ಗಳ ಮೇಲೆ ಬೆಂಗಳೂರು ಪೊಲೀಸರು ಗೂಂಡಾ ಅಕ್ಟ್ ಜಾರಿ ಮಾಡಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಶ್ರೀಧರ್ ಸೋಡ, ಸಂತೋಷ್ ಮೂಳೆ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಶ್ರೀಧರ್ ಸೋಡ ವೈಯ್ಯಾಲಿಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಈತ ಕೊಲೆ, ದರೋಡೆ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಗೂಂಡಾ ಆಕ್ಟ್ ಜಾರಿ ಮಾಡಲಾಗಿದೆ.

ಅದೇ ರೀತಿ ಸಂಪಂಗಿರಾಮ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸಂತೋಷ್ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿ 18ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅಲ್ಲದೇ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಹಿನ್ನಲೆ ಸಂತೋಷ್ ಮೇಲೂ ಗೂಂಡಾ ಕಾಯ್ದೆ ಜಾರಿ ಮಾಡಿ ಪೊಲೀಸರು ಬಂಧಿಸಿದ್ದಾರೆ.

ಏನಿದು ಗೂಂಡಾ ಕಾಯ್ದೆ?
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಈ ರೌಡಿಗಳನ್ನು ಮಟ್ಟ ಹಾಕಲು 1985ರಲ್ಲಿ ಜನತಾ ಸರ್ಕಾರ ಗೂಂಡಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತು.

ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು?
ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಆಸಿಡ್ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್ ಮೀಡಿಯಾದಲ್ಲಿ (ವೆಬ್‍ಸೈಟ್) ವಂಚಿಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿದೆ.

ನೇರವಾಗಿ ಜೈಲಿಗೆ:
ಈ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದಾಗಿದೆ. ಈ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಿ ಗಡೀಪಾರು ಆದೇಶವನ್ನೂ ಹೊರಡಿಸಲು ಅವಕಾಶವಿದೆ.

ಯಾವ ರಾಜ್ಯದಲ್ಲಿದೆ?
ಸ್ವಾತಂತ್ರ್ಯಾ ನಂತರ ರಾಜಸ್ತಾನ (1975), ಉತ್ತರ ಪ್ರದೇಶ (1971), ತಮಿಳುನಾಡು (1982), ಕೇರಳ(2007) ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿವೆ. ಡಿಜಿಟಲ್ ಅಪರಾಧ, ಸೈಬರ್ ಅಪರಾಧಗಳನ್ನು ಗೂಂಡಾ ಕಾಯ್ದೆಯಡಿ ತಮಿಳುನಾಡು ಮೊದಲ ಬಾರಿಗೆ 2004ರಲ್ಲಿ ತಂದಿತ್ತು.

Comments

Leave a Reply

Your email address will not be published. Required fields are marked *