-ಒಂದೇ ವಾರದಲ್ಲಿ 2 ದರೋಡೆ, ಆತಂಕದಲ್ಲಿ ಪ್ರಯಾಣಿಕರು..!
ರಾಮನಗರ: ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರೇ ಎಚ್ಚರವಾಗಿರಿ. ಯಾವ ಸಮಯದಲ್ಲೂ ಬೇಕಾದರೂ ನಿಮ್ಮ ದರೋಡೆ ಆಗಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಒಂದೇ ವಾರದಲ್ಲಿ ನಡೆದ 2 ದರೋಡೆ ಪ್ರಕರಣಗಳು ನಡೆದಿವೆ.
ಚನ್ನಪಟ್ಟಣದಿಂದ ಕೆಂಗೇರಿ ನಡುವೆ ಬೋಗಿಗಳ ಬಾಗಿಲು ಬಂದ್ ಮಾಡೋ ದರೋಡೆಕೋರರು ಸಿಕ್ಕಷ್ಟು ಬಾಚಿಕೊಂಡು, ಮಾರಕಾಸ್ತ್ರಗಳಿಂದ ಬೆದರಿಸಿ ನಗನಾಣ್ಯ, ಮೊಬೈಲ್ ಎಲ್ಲವನ್ನೂ ಕಿತ್ತುಕೊಂಡು ಟ್ರೈನ್ನ ಚೇನ್ ಎಳೆದು ಇಲ್ಲವೇ ಕ್ರಾಸಿಂಗ್ನಲ್ಲಿ ಜಂಪ್ ಮಾಡಿ ಪರಾರಿಯಾಗುತ್ತಿದ್ದಾರೆ. ಇದರಿಂದ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.

ಡಿಸೆಂಬರ್ 20, ರಾತ್ರಿ 10 ಗಂಟೆ: ಮೈಸೂರಿನಿಂದ ಹೊರಟಿದ್ದ ರೈಲಿನಲ್ಲಿ ದರೋಡೆ ನಡೆದಿದೆ. ಚನ್ನಪಟ್ಟಣದಲ್ಲಿ ಹತ್ತಿದ ನಾಲ್ವರು ದರೋಡೆಕೋರರು ಹೆಜ್ಜಾಲ-ನಾಯಂಡಹಳ್ಳಿ ನಡುವೆ ರೈಲಿನ ಎಸ್1, ಎಸ್2 ಬೋಗಿಯ ಬಾಗಿಲುಗಳನ್ನ ಬಂದ್ ಮಾಡಿ ಮಾರಕಾಸ್ತ್ರಗಳಿಂದ ಹೆದರಿಸಿ ಪ್ರಯಾಣಿಕರಿಂದ ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ದೋಚಿ ರೈಲಿನ ಚೇನ್ ಎಳೆದು ಪರಾರಿಯಾಗಿದ್ದಾರೆ.
ಡಿಸೆಂಬರ್ 22, ಮಧ್ಯರಾತ್ರಿ 12.30: ನೈಟ್ ಕ್ವೀನ್ಸ್ ಪ್ಯಾಸೆಂಜರ್ ರೈಲು ಚನ್ನಪಟ್ಟಣ ಹಾಗೂ ರಾಮನಗರ ನಡುವೆ ಸಂಚರಿಸೋ ವೇಳೆ ಜನರಲ್ ಕಂಪಾರ್ಟ್ ಮೆಂಟ್ನಲ್ಲೇ ದರೋಡೆ ನಡೆದಿದೆ. ಬಾಗಿಲ ಬಳಿ ನಿಂತಿದ್ದ ಕೋಲಾರದ ರೈತ ನಾಗರಾಜು, ಎಚ್.ಡಿ ಕೋಟೆಯ ರಾಮೇಗೌಡ ಎಂಬವರನ್ನ ಶೌಚಾಲಯಕ್ಕೆ ಎಳೆದೊಯ್ದು ಥಳಿಸಿ ನಗನಾಣ್ಯ, ಮೊಬೈಲ್ ದೋಚಿ ರೈಲಿನ ಚೇನ್ ಎಳೆದು ಪರಾರಿಯಾಗಿದ್ದಾರೆ.

ರೈಲ್ವೆ ಪೊಲೀಸರು ಎಚ್ಚೆತ್ತು ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಗಸ್ತು ಪಡೆಯನ್ನೇ ಹೆಚ್ಚಿಸಿ ದರೋಡೆಕೋರರ ಹೆಡೆಮುರಿ ಕಟ್ಟಬೇಕಿದೆ. ಆ ಮೂಲಕ ರೈಲ್ವೇ ಪ್ರಯಾಣಿಕರಿಗೆ ಭದ್ರತೆ ಒದಗಿಸಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply