ಕದ್ದ ಮೊಬೈಲ್ ಮಾರಾಟ ವಿಚಾರಕ್ಕೆ ಜಗಳ – ಸ್ನೇಹಿತನನ್ನೇ ಸುತ್ತಿಗೆಯಿಂದ ಜಜ್ಜಿ ಕೊಂದ

ಬೆಂಗಳೂರು: ಕಳ್ಳತನ ಮಾಡಿದ್ದ ಮೊಬೈಲನ್ನು ಮಾರಾಟ ಮಾಡುವ ವಿಚಾರಕ್ಕೆ ಜಗಳವಾಗಿ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಬೈಯ್ಯಪ್ಪನ ಹಳ್ಳಿಯಲ್ಲಿ ನಡೆದಿದೆ.

ರವಿತೇಜಾ ಕೊಲೆಯಾದ ಯುವಕ. ಆರೋಪಿ ರಾಕೇಶ್ ಡ್ಯಾನಿ ಹಾಗೂ ಕೊಲೆಯಾದ ರವಿತೇಜಾ ಇಬ್ಬರು ಚಂದಾಪುರ ಮೂಲದವರಾಗಿದ್ದು, ಮೊಬೈಲ್‍ಗಳನ್ನ ಕಳ್ಳತನ ಮಾಡುತ್ತಿದ್ದರು. ಕಳೆದ ವಾರ ಆನೇಕಲ್ ಬಳಿ ಹತ್ತು ಸಾವಿರ ಬೆಲೆ ಬಾಳುವ ಮೊಬೈಲ್ ಒಂದನ್ನು ಇಬ್ಬರು ಸೇರಿ ಕಳ್ಳತನ ಮಾಡಿದ್ದಾರೆ.

ಹತ್ತು ಸಾವಿರ ಬೆಲೆ ಬಾಳುವ ಮೊಬೈಲನ್ನು ಎಷ್ಟಕ್ಕೆ ಮಾರಾಟ ಮಾಡುವುದು ಎಂಬ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ನನ್ನ ಮೇಲೆಯೇ ಗಲಾಟೆ ಮಾಡಿದ ರವಿತೇಜಾನನ್ನು ಹೇಗಾದರೂ ಮಾಡಿ ಕೊಲೆ ಮಾಡಿ ಮುಗಿಸಬೇಕೆಂದು ಸ್ಕೆಚ್ ಹಾಕಿಕೊಂಡಿದ್ದ ಡ್ಯಾನಿ, ಜನವರಿ 31 ರಂದು ಆನೇಕಲ್ ಮರಸೂರು ರೈಲ್ವೆ ನಿಲ್ದಾಣದ ಬಳಿ ರವಿತೇಜಾ ನನ್ನ ಕರೆಸಿಕೊಂಡಿದ್ದಾನೆ.

ಈ ವೇಳೆ ಡ್ಯಾನಿ ಮತ್ತು ಅವನ ಸ್ನೇಹಿತರು ಹಾಗೂ ರವಿ ಸೇರಿ ರೈಲ್ವೇ ನಿಲ್ದಾಣದಲ್ಲಿ ಮದ್ಯ ಪಾರ್ಟಿ ಮಾಡಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಸುತ್ತಿಗೆ ಇಂದ ಜಜ್ಜಿ ಭೀಕರವಾಗಿ ರವಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಬೈಯ್ಯಪ್ಪನ ಹಳ್ಳಿ ರೈಲ್ವೆ ಪೊಲೀಸರು ರೈಲ್ವೆಗೆ ತಲೆಕೊಟ್ಟು ಸತ್ತಿದ್ದಾನೆ ಎಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲೆಯಾದ ರವಿತೇಜಾನ ತಂದೆ ನನ್ನ ಮಗನ ಸಾವು ಅಸಹಜ ಸಾವಲ್ಲ ಇದು ಕೊಲೆ ಎಂದು ದೂರು ನೀಡಿದ್ದಾರೆ. ಆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಬೈಯ್ಯಪ್ಪನ ಹಳ್ಳಿ ರೈಲ್ವೆ ಪೊಲೀಸರಿಗೆ ಕೊಲೆಯಾಗಿದೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ರಾಕೇಶ್ ಡ್ಯಾನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿರುವ ಬೈಯ್ಯಪ್ಪನ ಹಳ್ಳಿ ರೈಲ್ವೆ ಪೊಲೀಸರು ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *