ಹೈಟೆಕ್ ವೇಶ್ಯಾವಾಟಿಕೆಗೆ ಕಾವಲು ನಿಲ್ತಿದ್ದ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಅರೆಸ್ಟ್

ಬೆಂಗಳೂರು: ನಗರದ ಬಿಟಿಎಂ ಲೇಔಟ್‍ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆಗೆ ಪೊಲೀಸ್ ಪೇದೆಯೇ ಕಾವಲು ನಿಲ್ಲತ್ತಿದ್ದ ವಿಚಾರ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಪೊಲೀಸ್ ಪೇದೆ ಕರಿಬಸಪ್ಪನನ್ನು ಮೈಕೋ ಲೇಔಟ್ ಪೊಲೀಸರು ಈಗ ಬಂಧಿಸಿದ್ದಾರೆ.

ಕಳೆದವಾರ ಮೈಕೋಲೇಔಟ್ ಪೊಲೀಸರು ಬಂಗಲೆ ಮೇಲೆ ದಾಳಿ ನಡೆಸಿ ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಶರವಣನನ್ನು ಬಂಧಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ತಮ್ಮ ದಂಧೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಸಹಾಯ ಮಾಡುತ್ತಿದ್ದರು ಎಂದು ಆರೋಪಿಗಳು ಹೇಳಿದ್ದರು. ಹೇಳಿಕೆಯ ಆಧಾರದಲ್ಲಿ ಈಗ ಕರಿಬಸಪ್ಪನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ತಿಂಗಳಿಗೆ 5ಲಕ್ಷ ರೂ:
ವೇಶ್ಯಾವಾಟಿಕೆಗೆ ಕಾವಲು ನಿಲ್ಲುತ್ತಿದ್ದ ಪೇದೆ ಕರಿಬಸಪ್ಪನಿಗೆ ತಿಂಗಳಿಗೆ 5 ಲಕ್ಷ ರೂ. ಮಾಮುಲು ಕೊಡಬೇಕಿತ್ತು. ಹಣ ಕೊಡದೇ ಇದ್ದರೆ ಇವನೇ ನಿಂತು ರೇಡ್ ಮಾಡಿಸುತ್ತಿದ್ದ. ಕ್ರೆಡಿಟ್ ಕಾರ್ಡ್ ನಲ್ಲಿ ಪಿಂಪ್‍ಗಳ ಹತ್ತಿರ ಕರಿಸಬಸಪ್ಪ ಹಣ ವಸೂಲಿ ಮಾಡುತ್ತಿದ್ದ.

ತಿಂಗಳಿಗೆ 5 ಲಕ್ಷಕ್ಕೂ ಹೆಚ್ಚು ಮಾಮೂಲಿ ನೆಟ್‍ಬ್ಯಾಕಿಂಗ್‍ನಲ್ಲೇ ತೆಗೆದುಕೊಳ್ಳುತ್ತಿದ್ದ ಈತ ಎಸಿಪಿ ಕೂಡ ನನ್ನ ಕೈಯಲ್ಲಿ ಇದ್ದಾರೆ. ಇನ್ಸ್ ಪೆಕ್ಟರ್‍ಗೂ ನಾನೇ ಮಾಮೂಲಿ ಕೊಡುತ್ತೇನೆ ಎಂದು ಹೇಳುತ್ತಿದ್ದ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಈಗ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?
ಪ್ರಕರಣದ ಪ್ರಮುಖ ಆರೋಪಿ ಉಸ್ಮಾನ್ ವೆಬ್‍ಸೈಟ್ ತೆರೆದು ಈ ದಂಧೆ ನಡೆಸುತ್ತಿದ್ದ. ದಂಧೆಗೆ ಮುಂಬೈಯಿಂದ ಹುಡುಗಿಯರನ್ನು ವಿಮಾನದಲ್ಲಿ ಕರೆತರಲಾಗುತಿತ್ತು. ವೆಬ್‍ಸೈಟ್ ನಲ್ಲಿ ಹುಡುಗಿಯರ ಭಾವಚಿತ್ರವನ್ನು ಹಾಕಿ ಗಿರಾಕಿಗಳಿಗೆ ಆನ್‍ಲೈನ್ ನಲ್ಲಿ ಹಣವನ್ನು ಪಾವತಿ ಮಾಡುವಂತೆ ಹೇಳುತ್ತಿದ್ದ.

ವಾರಾಂತ್ಯಗಳಲ್ಲಿ ಉಸ್ಮಾನ್ ಮುಂಬೈನಿಂದ ಮಹಿಳೆಯರನ್ನು ಕರೆತರುತ್ತಿದ್ದ. ವಿಮಾನದ ಟಿಕೆಟ್ ಗಳನ್ನು ಈತನೇ ಬುಕ್ ಮಾಡುತ್ತಿದ್ದ. ಸಿಇಒಗಳು, ಕಂಪನಿಯ ಅತಿಥಿಗಳು ಮಾತ್ರ ಮನೆಗೆ ಬರುತ್ತಾರೆಂದು ಹೇಳಿದ್ದ ಆರೋಪಿ ಉದ್ಯಮಿಯೊಬ್ಬರಿಂದ ಮನೆಯನ್ನು ಬೋಗ್ಯಕ್ಕೆ ಪಡೆದುಕೊಂಡಿದ್ದ. ಬಂಗಲೆ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವ ವಿಚಾರ ಮನೆಯ ಮಾಲೀಕರಿಗೆ ತಿಳಿದಿರಲಿಲ್ಲ.

ಶ್ರೀಮತರು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ ಈತನ ತಂಡ ಗ್ರಾಹಕರಿಂದ 25 ಸಾವಿರ ರೂ., 30 ಸಾವಿರ ರೂ. ಚಾರ್ಜ್ ಮಾಡುತ್ತಿದ್ದರು. ದಾಳಿ ವೇಳೆ ನಾಲ್ಕು ಸ್ವೈಪಿಂಗ್ ಯಂತ್ರಗಳು ಸಿಕ್ಕಿತ್ತು. ಪ್ರತಿನಿತ್ಯ ಬರುವ ಗ್ರಾಹಕರಿಗೆ ವಾಟ್ಸಪ್‍ನಲ್ಲಿ ಯುವತಿಯರ ಭಾವಚಿತ್ರವನ್ನು ಕಳುಹಿಸಿ ಡೀಲ್ ನಡೆಸುತ್ತಿದ್ದರು.

Comments

Leave a Reply

Your email address will not be published. Required fields are marked *