ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

ಬೆಂಗಳೂರು: ಇಕ್ಕಟಿನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ತವರು ಜಿಲ್ಲೆಗಳಿಗೆ ಕಳಿಸಲು ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಯನ್ನ ಮಾಡಿದೆ. ಆದರೆ ಪ್ರಯಾಣಿಕರು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಾವಿರಾರು ಜನ ಗುಂಪು ಗುಂಪಾಗಿ ಓಡಾಡುವುದು, ನಿಂತುಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಅನೇಕರು ಮಾಸ್ಕ್ ಧರಿಸದೇ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು ಹಾಗೂ ಓಡಾಡುತ್ತಿದ್ದರು.

ಸರ್ಕಾರ ಇಷ್ಟೇಲ್ಲ ಅನುಕೂಲ ಒದಗಿಸಿದರೂ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತಿದ್ದು ಬೇಸರದ ಸಂಗತಿಯಾಗಿದೆ. ನೂರಾರು ಜನರು ರಾತ್ರಿಯೇ ಬಸ್ ನಿಲ್ದಾಣಕ್ಕೆ ಬಂದಿದ್ದರಿಂದ ಜನದಟ್ಟನೆ ಹೆಚ್ಚಾಗಿತ್ತು. ಹೀಗಾಗಿ ಜನರು ಎಲ್ಲಂದರಲ್ಲಿ ಕುಳಿತು, ಮಲಗಿ ಕಾಲ ಕಳೆದರು. ಅಷ್ಟೇ ಅಲ್ಲದೆ ಬೆಳಗ್ಗೆಯೂ ಸಾಮಾಜಿಕ ಅಂತರ ಕಂಡು ಬರಲಿಲ್ಲ.

ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆದು ಖಾಸಗಿ ವಾಹನಗಳಲ್ಲಿಯೂ ಸಂಚರಿಸಬಹುದಾಗಿದೆ. ರೆಡ್‍ಝೋನ್‍ಗಳಿಗೆ ಬಸ್ ಸಂಚಾರ ಇರುವುದಿಲ್ಲ. ರಾಜ್ಯ ಸಾರಿಗೆ ರಸ್ತೆ ಇಲಾಖೆಯು ಪ್ರತಿ ಡಿಪೋದಿಂದ ಒಟ್ಟು 150 ಕೆಎಸ್‌ಆರ್‌ಟಿಸಿ ಬಸ್‍ಗಳನ್ನ ಕರೆಸಿಕೊಂಡಿದೆ. ಈ ಎಲ್ಲಾ ಬಸ್‍ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲಿವೆ.

Comments

Leave a Reply

Your email address will not be published. Required fields are marked *