ಮಹದಾಯಿ ಯೋಜನೆ ಅನುಷ್ಠಾನ ಅಷ್ಟು ಸುಲಭವಿಲ್ಲ – ಸರ್ಕಾರದ ಮುಂದಿವೆ ಸವಾಲುಗಳು

ಬೆಂಗಳೂರು: ಇತ್ತೀಚೆಗೆ ಸುಪ್ರೀಂಕೋರ್ಟ್ ಮಹದಾಯಿ ನದಿ ವಿವಾದ ಕುರಿತಂತೆ ಕೇಂದ್ರ ಸರ್ಕಾರ ನ್ಯಾಯಾಧೀಕರಣದ ಐತೀರ್ಪಿನ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಅಡ್ಡಿ ಇಲ್ಲ ಎಂದು ಮಧ್ಯಂತರ ಆದೇಶ ಕೊಟ್ಟಿದೆ. ರಾಜ್ಯ ಸರ್ಕಾರಕ್ಕೆ ರಾಜ್ಯದ ಹಿತಾಸಕ್ತಿಗೆ ಸುಪ್ರೀಂಕೋರ್ಟಿನ ಈ ಆದೇಶ ಪೂರಕವೇನೋ ಹೌದು. ಆದರೆ ರಾಜ್ಯ ಸರ್ಕಾರದ ಮುಂದಿನ ಹಾದಿ ಅಷ್ಟು ಸುಲಭವಿಲ್ಲ.

ಮಹದಾಯಿ ಕುಡಿಯುವ ನೀರಿನ ಯೋಜನೆ ಕಾರ್ಯರೂಪಕ್ಕೆ ಬರುವುದು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಹತ್ತಾರು ಸವಾಲುಗಳು ರಾಜ್ಯ ಸರ್ಕಾರದ ಎದುರಿವೆ. ಹಾಗಂತ ರಾಜ್ಯ ಸರ್ಕಾರವೇನೂ ಸುಮ್ಮನೆ ಕುಳಿತ್ತಿಲ್ಲ. ತನ್ನ ವ್ಯಾಪ್ತಿಯ ಪ್ರಕ್ರಿಯೆಗಳನ್ನು ಸರ್ಕಾರ ಆರಂಭಿಸಿದೆ.

ಈ ನಿಟ್ಟಿನಲ್ಲಿ ಆಗಬೇಕಾದ ಮೊದಲ ಕೆಲಸ ಏನೆಂದರೆ, ಕೇಂದ್ರ ಸರ್ಕಾರ ಮೊದಲಿಗೆ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಯನ್ನು ಹೊರಡಿಸುವುದು. ಆದರೆ ಸುಪ್ರೀಂಕೋರ್ಟ್ ಗೆಜೆಟ್ ನೋಟಿಫಿಕೇಷನ್‍ಗೆ ಸಮ್ಮತ ಸೂಚಿಸಿದರೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಲಕ್ಷಣಗಳು ತೋರುತ್ತಿಲ್ಲ. ಕೇಂದ್ರವು ತನ್ನ ಗೆಜೆಟ್ ನೋಟಿಫಿಕೇಷನ್ ಪ್ರಕಟಿಸಲು ಇನ್ನೂ ಸಮಯ ತೆಗೆದುಕೊಳ್ಳಬಹುದು ಅನ್ನುತ್ತಾರೆ ತಜ್ಞರು. ಸರ್ಕಾರವೂ ಇದೇ ಆತಂಕದಲ್ಲಿದೆ. ಇದನ್ನು ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

ಮಹದಾಯಿ ಯೋಜನೆಗಾಗಿ ಕೇಂದ್ರ ಅರಣ್ಯ ಇಲಾಖೆಯ ಅನುಮೋದನೆ ಪಡೆಯುವುದು ರಾಜ್ಯದ ಮುಂದಿರುವ ದೊಡ್ಡ ಸವಾಲಾಗಿದೆ. ಯೋಜನೆ ಜಾರಿಗೆ ಸುಮಾರು 500 ಎಕ್ರೆಗೂ ಹೆಚ್ಚು ಅರಣ್ಯ ಭೂಮಿಯ ಅಗತ್ಯ ಇದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ವಿಳಂಬವಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಹಣಕಾಸು ಮುಗ್ಗಟ್ಟು
ಸಧ್ಯ ರಾಜ್ಯ ಸರ್ಕಾರ ದೊಡ್ಡ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈಗಾಗಲೇ ಸಾಕಷ್ಟು ಇಲಾಖೆಗಳ ಯೋಜನೆಗಳಿಗೆ ಅನುದಾನ ಕಡಿತಕ್ಕೆ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಮಟ್ಟದಲ್ಲಿ ಅನಗತ್ಯ ವೆಚ್ಚ ಕಡಿತಕ್ಕೂ ಮುಂದಾಗಿದೆ. ಈ ಮಧ್ಯೆ ಸುಪ್ರೀಂಕೋರ್ಟ್ ಕೇಂದ್ರದ ಗೆಜೆಟ್ ನೋಟಿಫಿಕೇಷನ್‍ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮಹದಾಯಿ ಯೋಜನೆಗೆ ಹಣದ ಕ್ರೋಢೀಕರಣ ಈ ಬಜೆಟ್‍ನಲ್ಲೇ ಮಾಡುವ ಅನಿವಾರ್ಯತೆಗೆ ಸರ್ಕಾರ ಸಿಕ್ಕಿಬಿದ್ದಿದೆ.

ಸರ್ಕಾರದ ಮೂಲಗಳ ಪ್ರಕಾರ ಕಳಸಾ-ಬಂಡೂರಿ ನಾಲಾ ಯೋಜನೆ, ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆ ಘಟಕ ನಿರ್ಮಿಸಲು ಸುಮಾರು 7 ಸಾವಿರ ಕೋಟಿ ರೂ ಅನುದಾನ ಬೇಕಾಗಿದೆ. ಅದರಲ್ಲೂ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸುಮಾರು 1,800 ಕೋಟಿ ರೂ. ವೆಚ್ಚ ತಗುಲಲಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕಾಸು ಹೊಂದಾಣಿಕೆ ಸರ್ಕಾರದ ಮುಂದಿರುವ ಕಠಿಣ ಸವಾಲು. ಇದಕ್ಕಾಗಿ ಸಾಲ ಪಡೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿ ಬಜೆಟ್ ನಲ್ಲಿ ಯೋಜನೆಗೆ ಸಿಎಂ ಹೆಚ್ಚುವರಿ ಅನುದಾನ ನೀಡಲಿದ್ದಾರೆ ಎನ್ನಲಾಗಿದೆ. ಆದರೆ ಇಷ್ಟೆಲ್ಲ ತಯಾರಿ ಅಂದುಕೊಂಡ ಸಮಯದೊಳಗೆ ಆಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

Comments

Leave a Reply

Your email address will not be published. Required fields are marked *