ಶಾಸಕರ ಭೇಟಿಗಾಗಿ ದಿನವಿಡೀ ಕೈ ನಾಯಕರ ಕಸರತ್ತು

ಬೆಂಗಳೂರು: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರುಗಳು ಉಳಿದುಕೊಂಡಿರುವ ಬೆಂಗಳೂರು ಹೊರ ವಲಯದ ಖಾಸಗಿ ರೆಸಾರ್ಟ್ ಮುಂದೆ ಇಂದು ಹೈಡ್ರಾಮವೇ ನಡೆದು ಹೋಗಿದೆ. ಬೆಳ್ಳಂಬೆಳಗ್ಗೆ 5.30ಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ರೆಸಾರ್ಟ್ ಎಂಟ್ರಿಗೆ ಮುಂದಾಗಿದ್ದಾರೆ.

https://twitter.com/INCKarnataka/status/1240110297085431810

ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ದಿಗ್ವಿಜಯ್ ಸಿಂಗ್ ಹಾಗೂ 5 ಶಾಸಕರುಗಳು, ವಿಮಾನ ನಿಲ್ದಾಣದಿಂದ ನೇರವಾಗಿ ಹೊರ ವಲಯದ ರೆಸಾರ್ಟಿಗೆ ತೆರಳಿ ಶಾಸಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ದಿಗ್ವಿಜಯ್ ಸಿಂಗ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಶಾಸಕರಾದ ರಿಜ್ವಾನ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್ ಸಾಥ್ ನೀಡಿದರು. ಆದರೆ ಪೊಲೀಸರು ಪ್ರವೇಶಕ್ಕೆ ನಿರಾಕರಿಸಿದಾಗ ರೆಸಾರ್ಟ್ ಮುಂದೆ ಕಾಂಗ್ರೆಸ್ ನಾಯಕರುಗಳು ಧರಣಿ ನಡೆಸಿದರು. ಆನಂತರ ಕಾಂಗ್ರೆಸ್ ನಾಯಕರನ್ನ ಬಂಧಿಸಿ ಅಮೃತಳ್ಳಿ ಪೊಲೀಸ್ ಠಾಣೆಗೆ ಕರೆತರಲಾಯ್ತು.

ರಾಜ್ಯಸಭಾ ಅಭ್ಯರ್ಥಿಯಾಗಿರುವ ತಾವು ತಮ್ಮ ಪಕ್ಷದ ಶಾಸಕರನ್ನ ಭೇಟಿ ಮಾಡಲೇಬೇಕು ಎಂದು ದಿಗ್ವಿಜಯ್ ಸಿಂಗ್ ಪೊಲೀಸರ ಬಳಿ ಪಟ್ಟು ಹಿಡಿದಿದ್ದಾರೆ. ಆಗ ಪೊಲೀಸರು ಅನಿವಾರ್ಯವಾಗಿ ಬಂಧಿಸಿದ ಎಲ್ಲಾ ನಾಯಕರನ್ನು ಬಿಎಂಟಿಸಿ ಬಸ್ಸಿನಲ್ಲಿ ನಗರ ಪೊಲೀಸ್ ಕಮೀಷನರ್ ಕಚೇರಿಗೆ ಕರೆದೊಯ್ದಿದ್ದಾರೆ. ಆದರೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಮಾತ್ರ ಇದು ನನ್ನ ಕೈಯಲ್ಲಿಲ್ಲ ರಾಜ್ಯ ಪೊಲೀಸ್ ಮಹಾ ನಿರ್ದೆಶಕರನ್ನ ಕೇಳಿ ಎಂದಿದ್ದಾರೆ.ಅಲ್ಲಿಂದ ಹೊರಟ ಕೈ ನಾಯಕರು ಇನ್ ಫೆಂಟ್ರಿ ರಸ್ತೆಯ ಪೊಲೀಸ್ ಮಹಾ ನಿರ್ದರಶಕರ ಕಚೇರಿಗೆ ತೆರಳಿ ಶಾಸಕರ ಭೇಟಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಅಲ್ಲಿಯೂ ಯಶಸ್ಸು ಸಿಗದಾಗ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ದಿಗ್ವಿಜಯ್ ಸಿಂಗ್ ಸಭೆ ನಡೆಸಿ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಆನಂತರ ಎಲ್ಲಾ ನಾಯಕರುಗಳು ಜಂಟಿಯಾಗಿ ಪತ್ರಿಕಾ ಘೋಷ್ಠಿ ನಡೆಸಿ ಕೋರ್ಟ್ ಹೋರಾಟವನ್ನೇ ಮುಂದುವರಿಸುವುದಾಗಿ ಪ್ರಕಟಣೆ ಮಾಡಿದ್ದಾರೆ. ಹೀಗೆ ಇಡೀ ದಿನ ರಾಜ್ಯ ಕೈ ನಾಯಕರು ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಕೈ ಶಾಸಕರ ಭೇಟಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿ ವಿಫಲರಾಗಿದ್ದಾರೆ.

Comments

Leave a Reply

Your email address will not be published. Required fields are marked *