ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಾ ಇದೆ. ಮತ್ತೊಂದೆಡೆ ಹೊಸ ಯೋಜನೆ, ಹೊಸ ಕಾಮಗಾರಿಗೆ ನೀತಿ ಸಂಹಿತೆಯಿಂದಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಕಣ್ಣೀರು ಹಾಕುತ್ತಾ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

ಹೌದು. ಬಿಪಿಎಲ್ ಕಾರ್ಡ್ ಮತ್ತು ಆರೋಗ್ಯ ಭಾಗ್ಯ ಕಾರ್ಡನ್ನ ನಂಬಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ನೀತಿ ಸಂಹಿತೆಯಿಂದಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕಳೆದ 20 ದಿನಗಳ ಹಿಂದೆ ಬಾಣಸವಾಡಿಯ ಚಂದ್ರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಅಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯವರೇನೋ ಶಸ್ತ್ರ ಚಿಕಿತ್ಸೆ ಮಾಡ್ತೀವಿ ಕಾರ್ಡ್ ಇದ್ಯಯಲ್ಲ ಎಂದು ಮೊದಲು ಭರವಸೆ ಕೊಟ್ಟಿದ್ದಾರೆ. ಆದ್ರೆ ಬಿಲ್ಲಿಂಗ್ ಟೈಂನಲ್ಲಿ ಆನ್‍ಲೈನ್‍ನಲ್ಲಿ ನೋಡಿದಾಗ ಬಿಪಿಎಲ್‍ಕಾರ್ಡ್‍ನಲ್ಲಿ ವ್ಯಕ್ತಿಯ ಹೆಸರು ನಾಪತ್ತೆಯಾಗಿದೆ. ಸರಿ ಇನ್ನೇನು ತಿದ್ದುಪಡಿ ಮಾಡಿಕೊಂಡು ಬರೋಣವೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರೋಗಿಯ ಸಂಬಂಧಿಕರು ಹೋದ್ರೆ ಚುನಾವಣಾ ಸಂದರ್ಭದಲ್ಲಿ ಯಾವ ಲೋಪದೋಷವನ್ನು ಸರಿಮಾಡಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ರೋಗಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.


ಅತ್ತ ಲಕ್ಷ ಲಕ್ಷ ಬಿಲ್ ಕಟ್ಟಲಾರದೇ ರೋಗಿಯ ಕಡೆಯವರು ಪರದಾಟ ಪಟ್ಟಿದ್ದಾರೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬಾರಜು ಇಲಾಖೆಯವರನ್ನು ಕೇಳಿದ್ರೆ, ನಾವು ನೀತಿಸಂಹಿತೆ ಮುಗಿದ ಮೇಲೆ ಪಡಿತರ ಚೀಟಿ ದೋಷವನ್ನು ಸರಿಪಡಿಸಬಹುದು. ಈ ಬಗ್ಗೆ ನೋಟಿಸ್ ಬೋರ್ಡ್ ಕೂಡ ಹಾಕಲಾಗಿದೆ ಎಂದು ಇಲಾಖೆಯ ಪೂರ್ವವಲಯ ಉಪ ನಿರ್ದೇಶಕ ನಾಗಭೂಷಣ್ ಹೇಳಿದ್ದಾರೆ.

ರಾಜಕೀಯ ಆಸೆ ಆಮಿಷಗಳಿಗೆ ಬ್ರೇಕ್ ಹಾಕಲು ನೀತಿ ಸಂಹಿತೆ ಇದೆ. ಆದ್ರೆ ಕೆಲವೊಮ್ಮೆ ಈ ನಿಯಮಗಳು ಸಾಮಾನ್ಯ ಜನರಿಗೆ ಅದೆಷ್ಟು ತೊಂದರೆ ಕೊಡ್ತವೆ ಅನ್ನೋದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.

Comments

Leave a Reply

Your email address will not be published. Required fields are marked *