ಕರುಣ್ ನಾಯರ್ ಮದುವೆ ಮುಹೂರ್ತ ಪಿಕ್ಸ್

ಬೆಂಗಳೂರು: ಕರ್ನಾಟಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕರುಣ್ ನಾಯರ್ ಹಾಗೂ ಗೆಳತಿ ಸನಾಯ ಟಂಕರಿವಾಲಾ ಮದುವೆ ವಿಷಯ ಹಳೆಯದು. ಆದರೆ ಮದುವೆ ದಿನಾಂಕ ನಿಗದಿಯಾಗಿರೋದು ಈಗಿನ ಸುದ್ದಿ.

ಹೌದು, ಕರುಣ್ ನಾಯರ್ ಮುಂದಿನ ವರ್ಷ ಜನವರಿ 16ರಂದು ರಾಜಸ್ಥಾನದ ಉದಯಪುರದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಜನವರಿ 18ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಗೆಳತಿ ಸನಾಯ ಟಂಕರಿವಾಲಾ ಅವರೊಂದಿಗೆ ಕರುಣ್ ನಾಯರ್ ಈಗಾಗಲೇ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.

ಕರುಣ್-ಸನಾಯ ನಿಶ್ಚಿತಾರ್ಥ ಇತ್ತೀಚಿಗಗಷ್ಟೇ ಕೇರಳದಲ್ಲಿ ನಡೆದಿತ್ತು. ಮದುವೆ ಉದಯಪುರದಲ್ಲಿ ನಡೆಯಲಿದೆ. ರಾಜಸ್ಥಾನದ ಜೋಧ್‍ಪುರ ಕರುಣ್ ನಾಯರ್ ಅವರ ಜನ್ಮಸ್ಥಳವಾಗಿದೆ. 27 ವರ್ಷದ ಕರುಣ್ ನಾಯರ್ ಭಾರತ ಪರ 6 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕನ್ನಡದವರಾದ ಕರುಣ್ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಭಾರತದ 2ನೇ ಬ್ಯಾಟ್ಸ್ ಮನ್ ಎಂಬ ಹಿರಿಮೆಯೂ ಕರುಣ್ ಅವರದ್ದಾಗಿದ್ದು, 2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ 303 ರನ್ ಗಳಿಸಿದ್ದರು. ಅಲ್ಲದೆ 2014-15ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲೂ ತಮಿಳುನಾಡು ವಿರುದ್ಧ ಕರುಣ್ ಆಕರ್ಷಕ ತ್ರಿಶತಕ ದಾಖಲಿಸಿದ್ದರು.

Comments

Leave a Reply

Your email address will not be published. Required fields are marked *