ಕಲಬುರಗಿ ವ್ಯಕ್ತಿ ಸಾವಿನಲ್ಲಿ ಎಡವಟ್ಟು ಕೇಸ್- ಕಾರಣ ಪತ್ತೆ ಹಚ್ಚಲು ಖರ್ಗೆ ಆಗ್ರಹ

ಬೆಂಗಳೂರು: ಕಲಬುರಗಿಯಲ್ಲಿ ಕೊರೊನಾ ಸೋಂಕು ಪಸರಿಸದಂತೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿಯಲ್ಲಿ ಮನೆ ಮಾಡಿರುವ ಸೂಕ್ಷ್ಮ ಮತ್ತು ಆತಂಕದ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು. ಕಲಬುರಗಿಯಲ್ಲಿ ಮೊನ್ನೆ ಕೊರೊನಾಗೆ ದೇಶದ ಮೊದಲ ವ್ಯಕ್ತಿ ಬಲಿಯಾಗಿದ್ದು ದುರ್ದೈವ. ಆದರೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆ ವ್ಯಕ್ತಿಯಲ್ಲಿ ಕೊರೊನಾ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿಯಿಂದಲೇ ನಾನು ಸಹ ಜಿಲ್ಲಾಧಿಕಾರಿಗಳಿಂದ ಕಲಬುರಗಿ ವ್ಯಕ್ತಿಯ ಸಾವು ಕುರಿತು ಮಾಹಿತಿ ಪಡೆದೆ. ಎಲ್ಲ ಸುರಕ್ಷತಾ ಕ್ರಮಗಳನ್ನೂ ತಗೊಂಡಿರೋದಾಗಿ ಜಿಲ್ಲಾಧಿಕಾರಿಗಳು ಹೇಳಿದ್ರು. ಸೌದಿಯಿಂದ ಬಂದ ವ್ಯಕ್ತಿಗೆ ವಯಸ್ಸಾಗಿತ್ತು. ತಪಾಸಣೆ ವೇಳೆ ಕೊರೊನಾ ಇರೋ ಬಗ್ಗೆ ಗೊತ್ತಾಗಲಿಲ್ಲ ಅಂತ ಅಧಿಕಾರಿಗಳು ಹೇಳಿದ್ದರು. ಆದರೆ ಕೊರೊನಾದಿಂದಲೇ ಕಲಬುರಗಿ ವ್ಯಕ್ತಿ ಸಾವನ್ನಪ್ಪಿದ ಬಳಿಕ ಇನ್ನು ಮುಂದಾದರೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕಲಬುರಗಿಯಲ್ಲಿ ಕೈಗೊಳ್ಳಬೇಕಿದೆ. ಕೊರೊನಾ ಹಬ್ಬದಂತೆ ಸರ್ಕಾರ ಹೆಚ್ಚಿನ ಗಮನ ಕೊಡಬೇಕು. ಕಲಬುರಗಿ ವ್ಯಕ್ತಿಯ ಸಾವು ವಿಚಾರದಲ್ಲಿ ಯಾಕೆ ಹೀಗಾಯ್ತು ಅಂತ ಸರ್ಕಾರ ಪರಿಶೀಲನೆ ಮಾಡಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರವನ್ನು ಒತ್ತಾಯಿಸಿದರು.

ಸೌದಿಯಿಂದ ವ್ಯಕ್ತಿ ಬಂದ ಮೇಲೆ ನೂರಾರು ಜನರನ್ನು ಭೇಟಿ ಮಾಡಿದ್ದಾರೆ. ಅವರೆಲ್ಲರ ತಪಾಸಣೆ ನಡೆಸಬೇಕಿದೆ. ಸರ್ಕಾರ ಮತ್ತು ಅಧಿಕಾರಿಗಳು ಇಬ್ಬರೂ ಎಚ್ಚರದಲ್ಲಿ ಕೆಲಸ ಮಾಡಬೇಕು. ಕೋವಿಡ್ 19 ಎಲ್ಲೆಡೆ ಹಬ್ಬುತ್ತಿದೆ. ಪಕ್ಷದ ವತಿಯಿಂದ ಕೊರೊನಾ ಬಗ್ಗೆಯೂ ಜನಜಾಗೃತಿ ಮಾಡ್ತೇವೆ ಎಂದು ಇದೇ ವೇಳೆ ಖರ್ಗೆಯವರು ತಿಳಿಸಿದರು.

Comments

Leave a Reply

Your email address will not be published. Required fields are marked *