ಬೆಂಗಳೂರು: ಯಲಹಂಕದ ಏರ್ ಶೋ ಪ್ರದೇಶದ ಗೇಟ್ ನಂಬರ್ 5ರಲ್ಲಿ ನಿನ್ನೆಯಷ್ಟೇ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಘಟನೆ ಮಾಸುವ ಮುನ್ನವೇ ಏರೋ ಶೋ ನಡೆಯುತ್ತಿರುವ ಹಿಂಭಾಗದ ವಾಯುನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವಾಯುನೆಲೆಯ ಹಿಂಭಾಗದ ಆರ್ ಟಿಓ ಕಚೇರಿ ಬಳಿ ಇರುವ ಜಾರಕಬಂಡೆ ಅರಣ್ಯ ಪ್ರದೇಶದಲ್ಲಿರುವ 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಪ್ರದೇಶದಲ್ಲಿ ಒಣ ಹುಲ್ಲು ಇದ್ದಿದ್ದರಿಂದ ಬೆಂಕಿಯ ವ್ಯಾಪ್ತಿ ಹೆಚ್ಚಾಗಿದೆ. ಇದರಿಂದಾಗಿ ಅರಣ್ಯದ ಒಳಗೆ ಪ್ರವೇಶಿಸಲು ಸಾಧ್ಯವಾಗದಷ್ಟು ದಟ್ಟವಾಗಿ ಬೆಂಕಿ ಹೊತ್ತಿ ಉರಿಯುತ್ತಿದೆ.
ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಗ್ನಿ ಶಾಮಕ ಸಿಬ್ಬಂದಿ ಶೇ.40ರಷ್ಟು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಮತ್ತಷ್ಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply