ಕೊರೊನಾ ವಿರುದ್ಧ ಭಾರತದ ಯುದ್ಧ- ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

– ದೇಶಾದ್ಯಂತ ಇಂದು ಜನತಾ ಕರ್ಫ್ಯೂ

ಬೆಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣು ಮನುಕುಲದ ವಿನಾಶವನ್ನ ಎದುರು ನೋಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಂಡು ಕೇಳರಿಯದ ಅಪಾಯಕಾರಿ ವೈರಸ್ ಭಾರತ ಸೇರಿದಂತೆ ವಿಶ್ವಕ್ಕೆ ತಲೆ ನೋವಾಗಿ ಕಾಡುತ್ತಿದೆ. ಹಾಗಾಗಿ ಅಪಾಯ ತಡೆಗಟ್ಟಲು ಪ್ರಧಾನಿ ಮೋದಿಯೇ ದೇಶದ ಜನತೆಗೆ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಹಾಗಾಗಿ ಇಂದು ಯಾರೂ ಕೂಡ ಮನೆಯಿಂದ ಹೊರಬಾರದೇ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕರಿಸಬೇಕಾಗಿದೆ.

ದೇಶದಲ್ಲಿ ಕೊರೊನಾ ಸೋಂಕು 300ರ ಗಡಿದಾಟಿದೆ. ಸೋಂಕು ತಡೆಗಟ್ಟಲು ನಮಗೆ ನಾವೇ ಮುಂಜಾಗ್ರತೆ ವಹಿಸಿ ಮಹಾಮಾರಿ ಹಬ್ಬುವುದನ್ನ ನಿಯಂತ್ರಿಸಬೇಕಿದೆ. ಪ್ರಧಾನಿ ಮೋದಿ ದೇಶದ ಜನತೆಗೆ ಸ್ವಯಂ ಗೃಹಬಂಧನ ವಿಧಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇಶದ ಮೇಲೆ ಪರಕೀಯರು ದಾಳಿ ಮಾಡಿದ್ರೆ ಭಾರತೀಯರೆಲ್ಲರೂ ಹೇಗೆ ಎದೆಕೊಟ್ಟು ಹೋರಾಟ ಮಾಡಲು ಸಿದ್ಧವಾಗುವಿರೋ ಹಾಗೇ ಇಂದು ಕಾಣದ ಶತ್ರುವಿನ ವಿರುದ್ಧ ಜನತಾ ಕಫ್ರ್ಯೂ ವಿಧಿಸಿಕೊಂಡು ಹೋರಾಡಬೇಕಿರೋದು ದೇಶದ ಪ್ರಜೆಯಾಗಿ ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಕೊರೊನಾ ವೈರಾಣು ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಬೇಗ ಆವರಿಸುತ್ತದೆ. ಹಾಗಾಗಿ 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಹೊರಗೆ ಬಾರದಂತೆ ಪ್ರಧಾನಿ ಮನವಿ ಮಾಡಿದ್ದಾರೆ.

ಕೊರೊನಾ ವೈರಾಣು ವಿರುದ್ಧ ವೈದ್ಯರು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಮಾಧ್ಯಮವರ್ಗದವರು, ಆಟೋ, ಬಸ್, ರೈಲು ಸೇವೆ, ಪೊಲೀಸರು ಸೇರಿದಂತೆ ನಾನಾ ಕ್ಷೇತ್ರದ ಜನತೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನ ಗೌರವಿಸಿ ಸಂಜೆ 5ಗಂಟೆಗೆ ಚಪ್ಪಾಳೆ ಹೊಡೆದು, ಗಂಟೆ ಬಾರಿಸುವ ಮೂಲಕ ಅಭಿನಂದನೆ ಸಲ್ಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಇದಕ್ಕೆ ಜನರು ಬಹುಪರಾಕ್ ಎಂದಿದ್ದಾರೆ.

ಮೋದಿ ಸ್ವಯಂ ಕರ್ಫ್ಯೂ ಹೇರಿಕೊಂಡು ಕೊರೋನಾ ವಿರುದ್ಧ ಹೋರಾಡುವಂತೆ ಕೊಟ್ಟ ಕರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ನಾವ್ ಜನತಾ ಕರ್ಫ್ಯೂಗೆ ನಾವು ಬೆಂಬಲಿಸುತ್ತೇವೆ ಅಂದಿದ್ದಾರೆ. ಜನತಾ ಕರ್ಫ್ಯೂಗೆ ಕರುನಾಡೇ ಸ್ತಬ್ಧವಾಗಲಿದೆ. ಹೋಟೆಲ್, ಸಾರಿಗೆ, ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದೆ. ರೈಲು ಸೇವೆ ಕೂಡ ಸ್ತಬ್ಧಗೊಂಡಿದೆ.

ಭಾರತದಲ್ಲಿ 1975ರ ಜೂನ್ 25 ರಿಂದ 1977ರ ಮಾರ್ಚ್ 21ರವರೆಗೆ 21 ತಿಂಗಳ ಕಾಲ ಅಂದಿನ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೇ ಇಂದು ಕಾಣದ ಶತ್ರು ಕೊರೊನಾ ದೇಶದ ಜನತೆ ಮೇಲೆ ಆಕ್ರಮಣ ಮಾಡಿ ಅಟ್ಟಹಾಸ ಮೆರೆಯುತ್ತಿದ್ದು ಇದು ಒಂದು ರೀತಿ ತುರ್ತು ಪರಿಸ್ಥಿತಿಯಂತೆಯೇ ಗೋಚರಿಸುತ್ತಿದೆ. ಹಾಗಾಗಿ ಇಂದಿನ ಜನತಾ ಕರ್ಫ್ಯೂ ಬೆಂಬಲಿಸುವ ಅಗತ್ಯವಿದೆ.

Comments

Leave a Reply

Your email address will not be published. Required fields are marked *