‘ಕಸಬ್‍ಗೆ ನ್ಯಾಯಸಮ್ಮತ ಅವಕಾಶ ನೀಡಿದ ದೇಶ ನಮ್ಮದು’ – ಹುಬ್ಬಳ್ಳಿ ಕೇಸ್ ಬೆಂಗ್ಳೂರಿಗೆ ವರ್ಗಾಯಿಸಿ

ಬೆಂಗಳೂರು: ಕಸಬ್‍ಗೆ ನ್ಯಾಯಸಮ್ಮತ ಅವಕಾಶ ನೀಡಿದ ದೇಶ ನಮ್ಮದು, ಹಾಗಾಗಿ ಹುಬ್ಬಳ್ಳಿಯಲ್ಲಿ ವಕಾಲತ್ತು ವಹಿಸಲು ಭದ್ರತೆ ಕೊಡಿ ಇಲ್ಲ ಆ ಕೇಸ್ ಅನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾಯಿಸುತ್ತೇವೆ ಎಂದು ಹೈಕೋರ್ಟ್ ನ್ಯಾಯಾಧೀಶರು ಸರ್ಕಾರಕ್ಕೆ ಸೂಚಿಸಿದ್ದಾರೆ.

ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಜೈಲು ಪಾಲಾದ ಆರೋಪಿಗಳ ಪರ ವಕಾಲತ್ತು ವಹಿಸೋದಕ್ಕೆ ಹುಬ್ಬಳ್ಳಿ ಧಾರವಾಡ ವಕೀಲರು ನಿರಾಕರಣೆ ಮಾಡಿದ್ದರು. ಅದಕ್ಕಾಗಿ ಬೆಂಗಳೂರಿನಿಂದ ಆರೋಪಿಗಳ ಪರ ವಕಾಲತ್ತು ಹಾಕೋದಕ್ಕೆ ವಕೀಲರು ತೆರಳಿದ್ದಾಗ ಗಲಾಟೆ ನಡೆದು ಬೆಂಗಳೂರು ವಕೀಲರ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಕೀಲರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಆರೋಪಿಗಳ ಪರ ವಕಾಲತ್ತು ಹಾಕೋದಕ್ಕೆ ಅವಕಾಶ ಮಾಡಿಕೊಡಬೇಕು. ಮುಂಬೈನಲ್ಲಿ ನರಮೇಧ ಮಾಡಿದ ಕಸಬ್‍ಗೆ ನ್ಯಾಯ ಸಮ್ಮತವಾದ ಮಂಡಿಸಲು ಅವಕಾಶ ಮಾಡಿಕೊಟ್ಟ ದೇಶ ನಮ್ಮದು. ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಮೊನ್ನೆ ಆದೇಶ ಮಾಡುವಾಗ ಭದ್ರತೆ ವಹಿಸಬೇಕು ಎಂದು ಹೇಳಿದ್ದೆವು. ಆದರೆ ಅದು ಆಗಿಲ್ಲ. ಹೀಗೆ ಮಾಡಿದರೆ ಪ್ರಕರಣ ಹುಬ್ಬಳ್ಳಿಯಲ್ಲಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ನಾವೇ ಈ ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಮಾಡುತ್ತೇವೆ. ಸರ್ಕಾರ ಈ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತೆ ಅನ್ನೋದನ್ನು ನಾಳೆ ನ್ಯಾಯಾಲಯಕ್ಕೆ ತಿಳಿಸಿ ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಿಗಿಗೆ ಮುಖ್ಯನ್ಯಾಯಮೂರ್ತಿಗಳು ಸೂಚಿಸಿದರು.

Comments

Leave a Reply

Your email address will not be published. Required fields are marked *