ನೆರೆ ಪರಿಹಾರಕ್ಕೆ ಒತ್ತಾಯಿಸಿ ಶೀಘ್ರವೇ ಜೆಡಿಎಸ್‍ನಿಂದ ಕೇಂದ್ರಕ್ಕೆ ನಿಯೋಗ: ಹೆಚ್‍ಡಿಡಿ

– ನಾನು ಹೋರಾಟ ಮಾಡೋದನ್ನು ಯಾರಿಂದ ಕಲಿಯಬೇಕಿಲ್ಲ

ಬೆಂಗಳೂರು: ನೆರೆ ಪರಿಹಾರ ನೀಡುವಂತೆ ಒತ್ತಾಯಿಸಲು ಶೀಘ್ರವೇ ಜೆಡಿಎಸ್ ಪಕ್ಷದ ನಿಯೋಗದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.

ಕೇಂದ್ರದಿಂದ ಅನುದಾನ ಬಿಡುಗಡೆ ಆಗದ ವಿಚಾರಕ್ಕೆ ಇಂದು ಜೆಪಿ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ಶೀಘ್ರದಲ್ಲೇ ನಮ್ಮ ಪಕ್ಷದ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ ಮಾಡಿ ನೆರೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಅದರ ಮೇಲು ಅನುದಾನ ಬಾರದೇ ಹೋದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಾವು ಹೋರಾಟ ಮಾಡೋದ್ರಲ್ಲಿ ಹಿಂದೆ ಬಿಳುವುದಿಲ್ಲ. ಹೋರಾಟದ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ನನಗೆ ಇಲ್ಲ. ನಾನು ಹೋರಾಟ ಮಾಡೋದನ್ನು ಯಾರಿಂದ ಕಲಿಯಬೇಕಿಲ್ಲ. ಅನುದಾನಕ್ಕಾಗಿ ನಾನು ಪ್ರಧಾನಿಗೆ ಮೊದಲೇ ಪತ್ರ ಬರೆದಿದ್ದೆ. ಆದರೆ ಈವರೆಗೂ ಅ ಪತ್ರಕ್ಕೆ ಉತ್ತರ ಬಂದಿಲ್ಲ. ಪಾಪ ಬಿಜೆಪಿ ಅವರು ಕಾಶ್ಮೀರ, ಇನ್ನಿತರ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಕಾಗದ ನೋಡೋಕೆ ಅವರಿಗೆ ಟೈಂ ಇಲ್ಲ ಅನ್ನಿಸುತ್ತೆ ಎಂದು ಕೇಂದ್ರದ ನಾಯಕರಿಗೆ ಟಾಂಗ್ ನೀಡಿದರು.

ನಾನು ಹೋರಾಟಕ್ಕೆ ನಿಂತರೆ ಯಾವುದೇ ದಾಕ್ಷಿಣ್ಯ ಇಲ್ಲ. ಎರಡು ಸರ್ಕಾರಗಳ ವಿರುದ್ಧ ಪಾದಯಾತ್ರೆ ಮಾಡಿ ಹೋರಾಟ ಮಾಡಿದ್ದೇನೆ. ನೈಸ್ ವಿರುದ್ಧ ಹೋರಾಟ ಮಾಡಿದ್ದೇನೆ. ಹೀಗೆ ಹೋರಾಟವೇ ನನ್ನ ಜೀವನದ ಮಜಲು ಎಂದು ಕೇಂದ್ರದ ವಿರುದ್ಧ ಹೋರಾಟದ ಎಚ್ಚರಿಕೆ ಕೊಟ್ಟರು. ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು ಪ್ರತಿಭಟನೆ ಮಾಡಲಿ ಸಂತೋಷ ಎಂದರು.

Comments

Leave a Reply

Your email address will not be published. Required fields are marked *