ಹಗಲು ಹೊಡೆದು ರಾತ್ರಿ ರಾಜಿ ಮಾಡ್ಕೊಂಡ ನಲಪಾಡ್

ಬೆಂಗಳೂರು: ಯುವ ಕಾಂಗ್ರೆಸ್ ಕಾರ್ಯಕರ್ತ ಸಚಿನ್ ಮೇಲೆ ಹಲ್ಲೆ ಮಾಡಿದ್ದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತಿದ್ದಂತೆ ರಾತ್ರೋ ರಾತ್ರಿ ರಾಜಿ ಸಂಧಾನ ಮಾಡಿಕೊಂಡಿದ್ದಾನೆ. ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ತಡರಾತ್ರಿ ಡಿಕೆಶಿ ನಿವಾಸದಲ್ಲಿ ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ.

ರಾಜಿ ಮಾಡಿಸುವಂತೆ ನಲಪಾಡ್ ಕೆಪಿಸಿಸಿ ಅಧ್ಯಕ್ಷರ ಮೇಲೆ ಒತ್ತಡ ಹಾಕಿದ್ದ. ತಂದೆ ಶಾಸಕ ಹ್ಯಾರೀಸ್ ರಿಂದಲೂ ಡಿಕೆಶಿ ಮೇಲೆ ಒತ್ತಡ ಹಾಕಲಾಗಿತ್ತು. ಹೀಗಾಗಿ ತಡರಾತ್ರಿ ಇಬ್ಬರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡು ಡಿಕೆಶಿ ರಾಜಿ ಮಾಡಿಸಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ – ಮತ್ತೊಮ್ಮೆ ಸುದ್ದಿಯಾದ ನಲಪಾಡ್

ರಾಜಿ ನಂತರ ಪುಂಡ ನಲಪಾಡ್ ಗೆ ಡಿಕೆಶಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಿಂದು ಇದೇ ಫಸ್ಟ್, ಇದೇ ಲಾಸ್ಟ್ ಆಗ್ಬೇಕು. ಮತ್ತೆ ನಿನ್ನಿಂದ ಪಕ್ಷಕ್ಕೆ ಡ್ಯಾಮೇಜ್ ಆದರೆ ಪರಿಣಾಮ ಸರಿ ಇರಲ್ಲ. ನಾನು ನಿನ್ನ ಮೇಲೆ ಕ್ರಮ ತೆಗದುಕೊಳ್ಳಬೇಕಾಗುತ್ತೆ ಹುಷಾರ್ ಎಂದು ನಲಪಾಡ್‍ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಸಚಿನ್ ಬಳಿ ಕ್ಷಮೆ ಕೋರಿದ ನಲಪಾಡ್. ಇನ್ಮುಂದೆ ನಾನು ಆ ರೀತಿ ವರ್ತನೆ ಮಾಡಲ್ಲ ಎಂದಿದ್ದಾನೆ. ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಎರಡು ದಿನದ ಹಿಂದೆ ಸಚಿನ್ ಮೇಲೆ ನಲಪಾಡ್‍ ಹಲ್ಲೆ ಮಾಡಿದ್ದ. ನಿನ್ನೆ ವೈಯಾಲಿ ಕಾವಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಘಟನೆ ಏನು?
ಭಾನುವಾರ ಸಂಜೆ ವೈಯ್ಯಾಲಿಕಾವಲ್ ತೆಲುಗು ಭವನದಲ್ಲಿ ಕೈ ಕಾರ್ಯಕರ್ತರಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಕೈ ಶಾಸಕ ಬಿ.ನಾರಾಯಣ ರವರ ಪುತ್ರ ಗೌತಮ್, ನಲಪಾಡ್ ಸೇರಿದಂತೆ ಯೂತ್ ಕಾಂಗ್ರೆಸ್ಸಿನ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಪುತ್ರ ಗೌತಮ್ ಅವರಿಗೆ ವೇದಿಕೆ ಮೇಲೆ ಅವಕಾಶ ನೀಡಿರಲಿಲ್ಲವಂತೆ. ಇದನ್ನು ಸಚಿನ್ ಎಂಬಾತ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾನೆ. ಇದನ್ನೆಲ್ಲ ಪ್ರಶ್ನಿಸಲು ನೀನ್ಯಾರು ಎಂದು ಶಿವಕುಮಾರ್ ಸಚಿನ್‍ಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಅಲ್ಲೆ ಇದ್ದ ನಲಪಾಡ್ ಹಾಗೂ ಆತನ ಗನ್ ಮ್ಯಾನ್ ಏಕಾಏಕಿ ಸಚಿನ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ನಲಪಾಡ್ ಪಕ್ಷದ ಕೈ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು.

Comments

Leave a Reply

Your email address will not be published. Required fields are marked *