ಸರ್ಕಾರದಿಂದ ಸಾಮೂಹಿಕ ವಿವಾಹ ಯೋಜನೆಗೆ ಅನುಷ್ಠಾನ

– ಮದ್ವೆಯಾಗಲು ಬಯಸೋರು ದಾಖಲೆ ನೀಡಬೇಕು

ಬೆಂಗಳೂರು: ಸರ್ಕಾರದಿಂದ ಈ ವರ್ಷ ಸಾಮೂಹಿಕ ವಿವಾಹ ಯೋಜನೆ ಅನುಷ್ಠಾನವಾಗಲಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮದ ಭರ್ಜರಿ ಪ್ರಚಾರಕ್ಕೆ ಸರ್ಕಾರ ಮುಜರಾಯಿ ಇಲಾಖೆಗೆ ಸೂಚಿಸಿದೆ.

ಆಯ್ದ ನೂರು ದೇಗುಲದಲ್ಲಿ ಈ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಸರ್ಕಾರದ ಷರತ್ತು, ಮದ್ವೆಯಾಗಲು ಬಯಸುವವರು ಏನೆಲ್ಲ ದಾಖಲೆ ಒದಗಿಸಬೇಕು ಅನ್ನುವ ಬಗ್ಗೆ ಆಯಾಯ ದೇಗುಲದಿಂದ ಪ್ರಚಾರ ಮಾಡಬೇಕು ಅಂತ ಸೂಚಿಸಿದ್ದಾರೆ.

ಈಗಾಗಲೇ ಜನರ ಗೊಂದಲ ನಿವಾರಣೆಗೆ ಹೆಲ್ಪ್‍ಲೈನ್ ಆರಂಭವಾಗಿದ್ರೂ ಸಾರ್ವಜನಿಕರಿಂದ ನೀರಸ ಸ್ಪಂದನೆ ಸಿಕ್ಕಿದೆ. ಇದರಿಂದ ಅಲರ್ಟ್ ಆಗಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಹೊಸ ವರ್ಷದ ಆರಂಭದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ವಧು-ವರರ ತಲಾಷ್ ಕೆಲಸವನ್ನು ನೀಡಿದ್ದಾರೆ.

ಹೆತ್ತವರ ಒಪ್ಪಿಗೆ ಇಲ್ಲದೇ ಮದುವೆ, ಎರಡನೇ ವಿವಾಹ ನಡೆಸಲೇಬಾರದು ಅಂತ ಎಚ್ಚರಿಕೆ ಕೊಟ್ಟಿರುವ ಸರ್ಕಾರ, ಈ ಬಗ್ಗೆ ಸೂಕ್ತ ದಾಖಲೆ ಪರಿಶೀಲನೆ ನಡೆಸಲು ಖಡಕ್ ಸೂಚನೆ ಕೊಟ್ಟಿದೆ. ಒಟ್ಟಾರೆ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಎಡವಟ್ಟಾಗಬಾರದು ಎಂದು ಸಿಕ್ಕಾಪಟ್ಟೆ ಎಚ್ಚರಿಕೆ ವಹಿಸಿದ್ದು, ಆಯಾಯ ದೇಗುಲಕ್ಕೆ ಸುತ್ತೋಲೆ ಕೂಡ ಕಳುಹಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಮುಜರಾಯಿ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಷರತ್ತುಗಳು ಏನು?
30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಪೋಷಕರು ವಧು-ವರರ ದಾಖಲೆಯನ್ನು ನೀಡಬೇಕಾಗುತ್ತದೆ. ಪರೋಕ್ಷವಾಗಿ ಪ್ರೀತಿಸಿ ಮದುವೆ ಆಗುವ ಮಂದಿಗೆ ಅವಕಾಶವಿಲ್ಲ. ಎರಡನೇ ಮದುವೆಗೆ ಅವಕಾಶ ಇಲ್ಲ. ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಲೇಬೇಕು. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.

ಶಿಶು ಕಲ್ಯಾಣ ಇಲಾಖೆಯಿಂದ ಪ್ರೊತ್ಸಾಹ ಧನ ನೀಡಲಾಗುತ್ತದೆ. 40 ಸಾವಿರ ವೆಚ್ಚದಲ್ಲಿ 8 ಗ್ರಾಂ ಚಿನ್ನದ ತಾಳಿ ವರನಿಗೆ ವಸ್ತ್ರಕ್ಕಾಗಿ 5 ಸಾವಿರ ರೂ., ವಧುವಿಗೆ ಸೀರೆಗಾಗಿ 10 ಸಾವಿರ ರೂ. ನೀಡಲಾಗುತ್ತದೆ. ಹಣವನ್ನು ಮದುವೆಯ ನಂತರ ಬ್ಯಾಂಕ್ ಖಾತೆ ಜಮೆ ಮಾಡಲಾಗುತ್ತದೆ.

ವರ್ಷಕ್ಕೆ ಒಂದು ಸಾವಿರ ಸಾಮೂಹಿಕ ವಿವಾಹ ಮಾಡುವ ಯೋಚನೆಯನ್ನು ಸರ್ಕಾರ ರೂಪಿಸಿದ್ದು ತಂದೆ ತಾಯಿ ಒಪ್ಪಿದರೆ ಅಂತರ್ಜಾತಿ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ವಿವಾಹಕ್ಕೆ ಸೂಕ್ತ ದಾಖಲೆಗಳು ಸಲ್ಲಿಕೆ ಕಡ್ಡಾಯವಾಗಿದ್ದು ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಎ ವಲಯದ ದೇವಾಲಯಗಳನ್ನು ಸಾಮೂಹಿಕ ವಿವಾಹಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

Comments

Leave a Reply

Your email address will not be published. Required fields are marked *