ಕರ್ನಾಟಕದ ಯುಗಪುರುಷ ಹೆಚ್‍ಡಿಕೆ: ಈಶ್ವರಪ್ಪ ಟ್ವೀಟ್

ಬೆಂಗಳೂರು: ಹೆಚ್‍ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಯುಗಪುರುಷ ಎಂದು ಟ್ವೀಟ್ ಮಾಡುವ ಮೂಲಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಬೆಳಕಿಗೆ ಬಂದ ಬೆಂಗಳೂರಿನಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಹಿಂದೂ ನಾಯಕರ ಕೊಲೆಗೆ ಸಂಚು ರೂಪಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಕಿಡಗೇಡಿಗಳ ಕೃತ್ಯಕ್ಕೆ ಧರ್ಮದ ಲೇಪನ ಬೇಡ. ಉದ್ದೇಶ ಪೂರ್ವಕವಾಗಿ ಒಂದು ಧರ್ಮ ಟಾರ್ಗೆಟ್ ಮಾಡಬೇಡಿ ಎಂದು ಹೇಳಿದ್ದರು. ಜೊತೆಗೆ ಸಂಸದ ತೇಜಸ್ವಿ ಸೂರ್ಯ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸಂಚಿನ ವಿಚಾರವಾಗಿ ಮಾತನಾಡಿದ್ದ ಅವರು, ಸೂಲಿಬೆಲೆ, ತೇಜಸ್ವಿ ಸೂರ್ಯ ಮಹಾನ್ ದೇಶಭಕ್ತರೇನು ಅಲ್ಲ. ಯುಗಪುರುಷರು ಅಲ್ಲ. ಹೀಗಿದ್ರು ಅವರನ್ನು ಹುತಾತ್ಮ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.

ಈ ವಿಚಾರಕ್ಕೆ ಟ್ವಿಟ್ಟರ್ ಮೂಲಕ ಈಶ್ವರಪ್ಪ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮಾ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನ ಉದುರಿಸಿ ಅತ್ತಿದ್ದರು. ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ ಎಂದು ಟ್ವೀಟ್ ಮಾಡಿದ್ದಾರೆ.

ಅವರ ಯೋಗ್ಯತೆಗೆ ತಕ್ಕ ಮಾತು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಜಿ ಹೆಚ್‍ಡಿ ಕುಮಾರಸ್ವಾಮಿ ಅವರ ಯುಗಪುರುಷ ಹೇಳಿಕೆಗೆ ಟಾಂಗ್ ನೀಡಿದ್ದು, ಹೆಚ್‍ಡಿಕೆ ನೀಡಿದ್ದ ಹಿಂದಿನ ಹೇಳಿಕೆಗಳನ್ನ ಲೇವಡಿ ಮಾಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

Comments

Leave a Reply

Your email address will not be published. Required fields are marked *