ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಕೊಂದೇ ಬಿಟ್ಟ ಆಟೋ ಡ್ರೈವರ್

ಬೆಂಗಳೂರು: ಮುಂದಿನ ತಿಂಗಳಲ್ಲಿ ಮದುವೆ ನಿಗದಿಯಾಗಿದ್ದ 20 ವರ್ಷದ ಯುವತಿಯನ್ನು ಆಟೋ ಡ್ರೈವರ್ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಆಟೋ ಚಾಲಕ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಲಿಂಗನಹಳ್ಳಿಯಲ್ಲಿ ವಾಸವಾಗಿರೋ ರಾಜಣ್ಣ ಹಾಗೂ ರತ್ನಮ್ಮ ದಂಪತಿಗೆ ಎಲ್.ಆರ್ ಅಂಜಲಿ ಒಬ್ಬಳೇ ಮಗಳು. ಇವರು ವಾಸವಿರುವ ಜಾಗದಿಂದ 100 ಮೀಟರ್ ದೂರದಲ್ಲಿ ಕುರಿ ಮೇಯಿಸುವ ಜಾಗದಲ್ಲಿ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಕತ್ತು ಸೀಳಿದಂತೆ ರಕ್ತದ ಮಡುವಿನಲ್ಲಿ ಯುವತಿ ಬಿದ್ದಿದ್ದಳು ಎಂದು ದೊಡ್ಡಬಳ್ಳಾಪುರದ ಗ್ರಾಮೀಣ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಗಳು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಳು. ಆದರೆ ಇದೇ ವೇಳೆ ಆಟೋ ಚಾಲಕನೊಬ್ಬ ಆಕೆಯ ಹಿಂದೆ ಬಿದ್ದು, ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತು ಆಕೆ ನಂತರ ಪಿಯುಸಿಗೆ ಹೋಗಲೇ ಇಲ್ಲ ಎಂದು ರಾಜಣ್ಣ ಪೊಲೀಸರ ಬಳಿ ಹೇಳಿದ್ದಾರೆ.

ಆಟೋ ಚಾಲಕನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಮಗಳಿಗೆ ಸಂಬಂಧಿಕನೊಬ್ಬನ ಜೊತೆ ಡಿಸೆಂಬರ್ ತಿಂಗಳಲ್ಲಿ ವಿವಾಹ ಮಾಡುವುದಾಗಿ ನಿಶ್ಚಯಿಸಲಾಗಿತ್ತು. ಈ ವಿಚಾರ ಆಟೋ ಚಾಲಕನಿಗೆ ತಿಳಿದು ಆತನೇ ಕೊಲೆ ಮಾಡಿದ್ದಾನೆ ಎಂದು ಯುವತಿಯ ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ.

ಘಟನೆಯ ಬಳಿಕ ಆಟೋ ಚಾಲಕ ನಾಪತ್ತೆಯಾಗಿದ್ದು, ಆತನ ಫೋನ್ ಕೂಡ ಸ್ವಿಚ್ಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *