ಪೇಜಾವರಶ್ರೀ ಆರೋಗ್ಯ ಸ್ಥಿರ- ಬೆಂಗಳೂರು ವೈದ್ಯರು ಇಂದು ಮಣಿಪಾಲಕ್ಕೆ

ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎಂಟನೇ ದಿನ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿದಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಇಂದು ಬೆಂಗಳೂರಿನ ತಜ್ಞ ವೈದ್ಯರು ಆಗಮಿಸುವ ಸಾಧ್ಯತೆಯಿದೆ.

ಈ ಹಿಂದೆ ಎರಡು ದಿನ ಮಣಿಪಾಲದಲ್ಲೇ ಇದ್ದು ಮೇಲ್ವಿಚಾರಣೆ ನಡೆಸಿ ವಾಪಾಸ್ ತೆರಳಿದ್ದ ತಜ್ಞ ವೈದ್ಯರು, ಇದೀಗ ಮತ್ತೆ ಬಂದು ಶ್ರೀಗಳ ಆರೋಗ್ಯದ ರಿಪೋರ್ಟ್ ಸದ್ಯದ ಕಂಡೀಶನ್ ಪರಿಶೀಲನೆ ಮಾಡಲಿದ್ದಾರೆ. ರಕ್ತದೊತ್ತಡ ಮತ್ತು ಮಧುಮೇಹ ಸಹಜ ಸ್ಥಿತಿಯಲ್ಲಿದೆ. ಕಫ ಬಹುತೇಕ ಕರಗಿಯಾಗಿದೆ ಎಂಬ ಮಾಹಿತಿಯಿದೆ.

ಶ್ವಾಸಕೋಶದ ಸಮಸ್ಯೆ ಮಾತ್ರ ಕಾಣಿಸುತ್ತಿದೆ. ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೇಜಾವರ ಮಠದ ಭಕ್ತ ವಾಸುದೇವ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಕಳೆದ ರಾತ್ರಿ ಕೆಎಂಸಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ವಿಶ್ವೇಶತೀರ್ಥ ಸ್ವಾಮೀಜಿಯ ಪ್ರಜ್ಞಾ ಸ್ಥಿತಿಯಲ್ಲಿ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

ಕಳೆದ 24 ಗಂಟೆಗೆ ಹೋಲಿಸಿದರೆ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲೆ ಮುಂದುವರಿದಿದೆ. ಪೇಜಾವರ ಶ್ರೀಗಳು ಜೀವ ರಕ್ಷಕ ಸಾಧನಗಳ ಅಳವಡಿಕೆಯಲ್ಲಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದರು. ಕಳೆದ ಶುಕ್ರವಾರ ಬೆಳಗ್ಗಿನ ಜಾವ 5 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಅಡ್ಮಿಟ್ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *