ಖುದ್ದು ವಿಚಾರಣೆಗೆ ಹಾಜರಾಗಿ – ರಾಹುಲ್‌ ಗಾಂಧಿಗೆ ಬೆಂಗಳೂರು ಕೋರ್ಟ್‌ ಸಮನ್ಸ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಜಾಮೀನು ಮಂಜೂರು ಮಾಡಿದ 42 ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಖುದ್ದು ಹಾಜರಾಗಬೇಕೆಂದು ಸೂಚಿಸಿದೆ.

ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಪ್ರಕರಣಕ್ಕೆ (Defamation Case) ಸಂಬಂಧಿಸಿದಂತೆ ಜೂನ್ 7 ರಂದು ಕಡ್ಡಾಯವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್‌ ಆದೇಶಿಸಿದೆ.

ಈ ಹಿಂದೆ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಹುಲ್‌ ಗಾಂಧಿ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಕೋರ್ಟ್‌ ಹಾಜರಾಗಿದ್ದರೆ ರಾಹುಲ್‌ ಗಾಂಧಿ ಗೈರಾಗಿದ್ದರು. ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು

ಇಂದು ವಿಚಾರಣೆಯ ಸಂದರ್ಭದಲ್ಲಿ ಗಾಂಧಿ ಪರ ವಕೀಲರು INDIA ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಿರುವುದರಿಂದ ಅವರ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯವು ಮನವಿಯನ್ನು ನಿರಾಕರಿಸಿತ್ತು. ಮಧ್ಯಾಹ್ನದ ವಿಚಾರಣೆಯನ್ನು ಮುಂದೂಡಿ ನಂತರ ಜೂನ್‌ 7 ರಂದು ಖುದ್ದು ಹಾಜರಾಗಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

 

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರದ ಘೋಷಣೆಗಳನ್ನು ವಿರೋಧಿಸಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಬಿಜೆಪಿಯು ಸಾರ್ವಜನಿಕ ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ 40% ಕಮಿಷನ್ ಮಾಡುತ್ತಿದೆ ಎಂದು ಜಾಹೀರಾತುಗಳಲ್ಲಿ ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತನ್ನ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತನ್ನು ಪ್ರಕಟಿಸಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿತ್ತು.