ಮೋಕ್ಷಕ್ಕಾಗಿ ಕಪಿಲಾ ನದಿಗೆ ಹಾರಿದ ಬೆಂಗ್ಳೂರು ದಂಪತಿ!

ಮೈಸೂರು: ಕಪಿಲಾ ನದಿಗೆ ಹಾರಿ ಪ್ರಾಣ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಬೆಂಗಳೂರು ಮೂಲದ ದಂಪತಿಗಳು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಬೆಂಗಳೂರಿನ ಹೆಬ್ಬಾಳ ನಿವಾಸಿಗಳಾದ ನಾಗರಾಜು ಮತ್ತು ಕಲಾವತಿ ಎಂಬ ದಂಪತಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವರು. ನದಿಗೆ ಹಾರಿದ ದಂಪತಿಗಳಲ್ಲಿ ಪತಿ ನಾಗರಾಜು ಸಾವನ್ನಪ್ಪಿದ್ದರೆ, ಪತ್ನಿ ಕಲಾವತಿ ಬದುಕುಳಿದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಜಾಸ್ತಿಯಾಗಿ ತಿಂಗಳಿಗೆ ಕೋಟಿ ಹಣವನ್ನು ಗಳಿಸುತ್ತಿದೆ. ಈ ಮೂಲಕ ರಾಜ್ಯದ ಅತ್ಯಂತ ಶ್ರೀಮಂತರ ದೇವಾಲಯಗಳಲ್ಲಿ ನಂಜನಗೂಡಿನ ನಂಜುಂಡನ ಸನ್ನಿಧಿ ಸಹ ಒಂದಾಗಿದೆ.

ಇಂತಹ ಪವಿತ್ರ ಸ್ಥಳಕ್ಕೆ ಆಗಮಿಸುವ ಕೆಲವು ಭಕ್ತರು ಕಪಿಲಾ ನದಿಯಲ್ಲಿ ಜೀವ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಹೀಗೆ ಜೀವ ಕಳೆದು ಕೊಳ್ಳುತ್ತಿದ್ದಾರೆ. ಈಗ ಈ ಸಾಲಿಗೆ ಬೆಂಗಳೂರು ಮೂಲದ ಹೆಬ್ಬಾಳ ನಿವಾಸಿಗಳಾದ ನಾಗರಾಜು ಮತ್ತು ಕಲಾವತಿ ವೃದ್ಧ ದಂಪತಿನೂ ಸೇರ್ಪಡೆ ಆಗಿದ್ದಾರೆ.

ಕಾಲು ಜಾರಿ ನದಿಗೆ ಬಿದ್ದಿದ್ದೇವೆ ಎಂದು ಪ್ರಾಣಾಪಾಯದಿಂದ ಪಾರಾದ ಕಲಾವತಿ ಹೇಳಿದ್ದಾರೆ. ನಂಜನಗೂಡು ನಂಜುಂಡೇಶ್ವರನ ದರ್ಶನಕ್ಕಾಗಿ ಬೆಂಗಳೂರಿನಿಂದ ಬಂದಿದ್ದೆವು. ದೇವರ ದರ್ಶನ ಮುಗಿಸಿ ನದಿ ಹತ್ತಿರ ಬಂದ್ದೆವು. ಪತಿಯನ್ನು ಹಿಡಿದುಕೊಳ್ಳಲು ಹೋದಾಗ ನಾನೂ ನೀರಿಗೆ ಬಿದ್ದೆ ಎಂದು ಪೊಲೀಸರ ಮುಂದೆ ಕಲಾವತಿ ಹೇಳಿಕೆ ನೀಡಿದ್ದಾರೆ.

ಸದ್ಯ ಈ ಬಗ್ಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *