ರಾಜಕೀಯ ಹೈಡ್ರಾಮಾ ಮಧ್ಯೆ ಮಿಡ್‍ನೈಟ್ ಆಪರೇಷನ್- ಇದು ರಾಜಕೀಯ ಪ್ರೇರಿತನಾ?

ಬೆಂಗಳೂರು: ದೋಸ್ತಿ ಸರ್ಕಾರ ಪತನದ ಅಂಚಿನಲ್ಲಿದೆ. ವಿಶ್ವಾಸದ ಮಾತನಾಡಿದ್ದ ಮುಖ್ಯಮಂತ್ರಿಗಳು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಈ ಹೊತ್ತಲ್ಲಿ ರಾಜ್ಯ ರಾಜಕಾರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

ಐಎಂಎ ಮಾಲೀಕ ಮನ್ಸೂರ್ ಖಾನ್ 24 ಗಂಟೆಗಳಲ್ಲಿ ಭಾರತಕ್ಕೆ ಬರುತ್ತೇನೆ ಎಂದು ಸೋಮವಾರ ವಿಡಿಯೋ ರಿಲೀಸ್ ಮಾಡಿದ್ದನು. ಈ ಬೆನ್ನಲ್ಲೇ ಐಎಂಎ ಮಾಲೀಕನಿಗೆ ಮೋಸ ಮಾಡಿದ ಆರೋಪ ಹೊತ್ತಿರೋ ಶಿವಾಜಿನಗರ ಶಾಸಕ ರೋಷನ್ ಬೇಗ್ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಪುಣೆಗೆ ಜೂಟ್ ಹೇಳಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿದ ಎಸ್‍ಐಟಿ, ರೋಷನ್ ಬೇಗ್‍ರನ್ನು ವಶಕ್ಕೆ ತೆಗೆದುಕೊಂಡಿದೆ. ವಿಚಾರಣೆಗೆ ಹಾಜರಾಗುವಂತೆ ಎರಡು ನೊಟೀಸ್ ಕೊಟ್ಟಿದ್ರೂ ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿರಲಿಲ್ಲ. ಜೊತೆಗೆ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ರೋಷನ್ ಬೇಗ್ ಕಳೆದ ವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ  ಕೂಡ ನೀಡಿದ್ದಾರೆ.

ರಾಜೀನಾಮೆ ಬಳಿಕ ಬಿಜೆಪಿ ಸೇರೋ ಸುಳಿವು ನೀಡಿದ್ರು. ಆದರೂ ಸಿಎಂ ಮೇಲಿನ ವಿಶ್ವಾಸಕ್ಕೆ ಸದನಕ್ಕೆ ಬರ್ತೀನಿ ಎಂದು ಹೇಳಿದರು. ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಪುಣೆಗೆ ಹೋಗಿ ಅಲ್ಲಿಂದ ಮುಂಬೈ ನಂತರ ದುಬೈಗೆ ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ವಿಶ್ವಾಸದ ಹೊತ್ತಲ್ಲಿ ಕೈಕೊಟ್ಟು ಬಿಜೆಪಿಗೆ ಜಂಪ್ ಆಗಲು ಹೋಗ್ತಿದ್ದ ಬೇಗ್‍ರನ್ನು ಎಸ್‍ಐಟಿ ಮೂಲಕ ಸರ್ಕಾರವೇ ಖೆಡ್ಡಾಗೆ ಕೆಡವಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಮಿಡ್‍ನೈಟ್ ಆಪರೇಷನ್:
> ರಾತ್ರಿ 10.35 ಗಂಟೆ – ಕೆಐಎಎಲ್‍ಗೆ ರೋಷನ್ ಬೇಗ್ ಎಂಟ್ರಿ
> ರಾತ್ರಿ 10.45 ಗಂಟೆ – ಏರ್‍ಪೋರ್ಟ್ ಗೆ ಎಸ್‍ಐಟಿ ಎಂಟ್ರಿ
> ರಾತ್ರಿ 11 ಗಂಟೆ – ವಿಶೇಷ ವಿಮಾನ ಹತ್ತಲು ಮುಂದಾಗಿದ್ದ ಬೇಗ್ ವಶಕ್ಕೆ ಪಡೆದ ಎಸ್‍ಐಟಿ
> ರಾತ್ರಿ 11- 1 ಗಂಟೆ – 2 ಗಂಟೆಗಳ ಕಾಲ ವಿಐಪಿ ಲಾಂಜ್‍ನಲ್ಲೇ ಬೇಗ್ ವಿಚಾರಣೆ
> ರಾತ್ರಿ 1.05 ಗಂಟೆ – ಏರ್‍ಪೋರ್ಟ್ ನಿಂದ ಬೇಗ್‍ರನ್ನು ಕರೆದೊಯ್ದ ಎಸ್‍ಐಟಿ

Comments

Leave a Reply

Your email address will not be published. Required fields are marked *