ಐವರು ಆಪ್ತರನ್ನು ಬಿಟ್ಟು ಐವರನ್ನಷ್ಟೇ ಕೈ ಹಿಡಿದ ಬಿಎಸ್‍ವೈ ತಂತ್ರ ಫಲಿಸಿತು

ಬೆಂಗಳೂರು: ಮೂರು ವಾರಗಳ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅರ್ಧ ಕ್ಯಾಬಿನೆಟ್ ರಚನೆ ಆಗಿದೆ. ಆದರೆ ಕ್ಯಾಬಿನೆಟ್ ರಚಿಸುವ ವೇಳೆ ಬಿಎಸ್‍ವೈ ಅವರಿಗೆ ಧರ್ಮ ಸಂಕಟಕ್ಕೆ ಒಳಗಾಗಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

ಹೌದು. ಅವರು ಆಪ್ತರು, ಇವರು ಆಪ್ತರು, ಯಾರನ್ನ ಕೈ ಬಿಡುವುದು? ಆಪ್ತರ ಪಟ್ಟಿ ದೊಡ್ಡದಾದಾಗ ಬಿಜೆಪಿ ಹೈಕಮಾಂಡ್ ಮುಂದೆ ಐವರ ಹೆಸರುಗಳನ್ನೇ ಯಡಿಯೂರಪ್ಪ ಪ್ರಸ್ತಾಪಿಸಲೇ ಇಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಮಂತ್ರಿ ಸ್ಥಾನ ನೀಡಲು ಹಲವು ಆಪ್ತರ ಪಟ್ಟಿಯನ್ನು ಬಿಎಸ್‍ವೈ ಸಿದ್ಧಪಡಿಸಿಕೊಂಡಿದ್ದರು. ಕೊನೆಗೆ ಪಕ್ಷ ನಿಷ್ಠೆ, ಹಿರಿಯ ಶಾಸಕರ ಜೊತೆ ತನ್ನ ಆಪ್ತ ಶಾಸಕರ ಪಟ್ಟಿ ತುಲನೆ ಮಾಡಿದಾಗ ಆಪ್ತರ ಸಂಖ್ಯೆ ಜಾಸ್ತಿ ಇದೆ ಎನ್ನುವುದು ಬಿಎಸ್‍ವೈಗೆ ಗೊತ್ತಾಗಿದೆ.

ಈ ಪಟ್ಟಿಯನ್ನು ಹೈಕಮಾಂಡ್ ಮುಂದೆ ನೀಡಿದರೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಖಂಡಿತವಾಗಿ ಕೊಕ್ಕೆ ಹಾಕ್ತಾರೆ ಎಂಬ ಭಯ ಸಿಎಂ ಅವರನ್ನು ಕಾಡಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉಳಿದ ಆಪ್ತರಿಗೂ ಮಂತ್ರಿ ಸ್ಥಾನ ಸಿಗದೇ ಇದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎದುರಾಯಿತು. ಹೀಗಾಗಿ ಸಿಎಂ ಮೂವರು ಲಿಂಗಾಯತರು, ಇಬ್ಬರು ಒಕ್ಕಲಿಗರ ಹೆಸರು ಕೈ ಬಿಟ್ಟು ಪಟ್ಟಿಯನ್ನು ಕಳುಹಿಸಿದ್ದರು. ಈ ಪಟ್ಟಿಯಲ್ಲಿದ್ದ ಶಾಸಕರ ಪೈಕಿ ಒಬ್ಬರನ್ನು ಕೈ ಬಿಡುವಂತೆ ಹೈಕಮಾಂಡ್ ಸೂಚಿಸಿತು.

ಕೈ ಬಿಟ್ಟ 5 ಹೆಸರುಗಳು:
ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ಕೆ.ಜಿ.ಬೋಪಯ್ಯ ಹೆಸರನ್ನೇ ಬಿಎಸ್‍ವೈ ಹೇಳಿಲ್ಲವಂತೆ. ಅಂತಿಮವಾಗಿ ಪಕ್ಷ ನಿಷ್ಠೆ, ಹಿರಿಯ ಶಾಸಕರು ಮತ್ತು ಆಪ್ತ ಶಾಸಕರು ಸೇರಿ ಒಟ್ಟು 12 ಮಂದಿ ಪಟ್ಟಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದರು. ಬಿಎಸ್‍ವೈ ಸೂಚಿಸಿದ 12ರಲ್ಲಿ ಉಮೇಶ್ ಕತ್ತಿ ಬಿಟ್ಟು ಎಲ್ಲರಿಗೂ ಅವಕಾಶ ನೀಡಲಾಗಿದೆ.

Comments

Leave a Reply

Your email address will not be published. Required fields are marked *