ಭಾರತದ ಮುಸ್ಲಿಮರ ಪೌರತ್ವ ಕಸಿಯುವ ಕಾನೂನು ಇದಲ್ಲ – ತೇಜಸ್ವಿ ಸೂರ್ಯ

ಬೆಂಗಳೂರು: ಭಾರತದಲ್ಲಿನ ಮುಸ್ಲಿಮರ ಪೌರತ್ವ ಕಸಿಯುವ ಕಾನೂನು ಇದಲ್ಲ. ಮೂರು ದೇಶಗಳ ಅಲ್ಪ ಸಂಖ್ಯಾತರಿಗೆ ಪೌರತ್ವ ಕೊಡುವ ಕಾನೂನು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇನ್ನೊಂದು ಕಡೆ ಕೆಲವರು ಪೌರತ್ವ ಕಾಯ್ದೆಯ ಬಗ್ಗೆ ಮಾಹಿತಿ ಇಲ್ಲದೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಅಡ್ವಕೇಟ್ಸ್ ಫರ್ ನೇಷನ್ಸ್ ವತಿಯಿಂದ ಕಾಯ್ದೆ ಬಗ್ಗೆ ಇಂದು ವಿಚಾರ ಸಂಕೀರಣ ಆಯೋಜನೆ ಮಾಡಿದ್ದರು.

ಬೆಂಗಳೂರಿನ ಯವನಿಕ ಆಡಿಟೋರಿಯಂನಲ್ಲಿ ನಡೆದ ವಿಚಾರ ಸಂಕೀರಣದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ, ಸಂಸದ ತೇಜಸ್ವಿ ಸೂರ್ಯ, ಹಿರಿಯ ವಕೀಲ ಬಿವಿ ಆಚಾರ್ಯ, ಉಪ ಲೋಕಾಯುಕ್ತ ಸುಭಾಷ್ ಅಡಿ ಸೇರಿದಂತೆ ನೂರಾರು ಸಾರ್ವಜನಿಕರು ಭಾಗಿಯಾಗಿದ್ದರು. ಈ ವೇಳೆ ತೇಜಸ್ವಿ ಸೂರ್ಯ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

2014ರ ಹಿಂದೆ ಭಾರತಕ್ಕೆ ಬಂದಿರುವ ಯಾರಿಗೂ ಈ ಕಾಯ್ದೆಯಿಂದ ತೊಂದರೆಯಾಗುವುದಿಲ್ಲ. ಭಾರತದ ಈ ಸಹಸ್ರಾರು ವರ್ಷಗಳ ನಾಗರೀಕ ಸಂಪ್ರದಾಯಗಳನ್ನಾ ಕಾಪಾಡಲು ಈ ಕಾಯ್ದೆಯನ್ನು ತರಲಾಗುತ್ತಿದೆ. ಪೌರತ್ವ ಕಾಯ್ದೆಯನ್ನು ಜಾರಿಗೆ ತರುವಂತೆ ಮನಮಹೋನ್ ಸಿಂಗ್ ರಾಜ್ಯಸಭಾದಲ್ಲಿ ಭಾಷಣ ಮಾಡಿದ್ದರು. ಆದರೆ ಈಗ ಬಿಜೆಪಿ ಅದೇ ಕಾಯ್ದೆಯನ್ನಾ ಜಾರಿಗೆ ತಂದ್ರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪೌರತ್ವ ಕಾನೂನಿನ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲದೇ ವಿದ್ಯಾರ್ಥಿಗಳನ್ನ ದಾರಿ ತಪ್ಪಿಸಲಾಗುತ್ತಿದೆ. ಕಾನೂನನ್ನು ಸರಿಯಾಗಿ ಓದದೆ ಈ ರೀತಿ ಗಲಭೆಗಳಿಗೆ ಕಾರಣರಾಗುತ್ತಿದ್ದಾರೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *