ಸಿನಿಮಾ, ಧಾರಾವಾಹಿ ಶೂಟಿಂಗ್‍ಗೆ ಅನುಮತಿ – ನಾಳೆ ನಿರ್ಧಾರ

ಬೆಂಗಳೂರು: ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿರುವ ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್ ಗಳಿಗೆ ಸರ್ಕಾರ ಅನುಮತಿ ನೀಡುತ್ತದೆಯೋ? ಇಲ್ಲವೋ ಎನ್ನುವುದು ಮಂಗಳವಾರ ತಿಳಿಯಲಿದೆ.

ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್, ಸಿನಿಮಾ, ಧಾರಾವಾಹಿ ಶೂಟಿಂಗ್ ಯಾವಾಗ ಮಾಡಬಹುದು ಎಂದು ನಾಳೆ ಸಿಎಂ ಜೊತೆ ಚರ್ಚೆ ಮಾಡಿ ಹೇಳುತ್ತೇವೆ ಎಂದು ತಿಳಿಸಿದರು.

ಶೂಟಿಂಗ್ ವೇಳೆ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದರ ಬಗ್ಗೆ ನಾಳೆ ಚರ್ಚೆ ಮಾಡಿ ಪ್ರಕಟಣೆ ಮಾಡುತ್ತೇವೆ. ಜೊತೆಗೆ ಕೊರೊನಾ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗ ಬಿಬಿಎಂಪಿ ವಾರ್ ರೂಂ ಬಗ್ಗೆ ಕೇಂದ್ರ ಹಾಗೂ ಹಲವು ರಾಜ್ಯಗಳು ಮಾಹಿತಿ ಕೇಳಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಸೇರಿಸಿ ಏಳು ವಲಯ ಮಾಡುತ್ತೇವೆ. ವಲಯವಾರು ವಿಂಗಡಣೆ ಮಾಡುವ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತೇವೆ. ಇಲ್ಲವಾದರೆ ಬೆಂಗಳೂರು ಒಂದು ಕಡೆ ಕೊರೊನಾ ಇದ್ದರೆ, ಇಡೀ ಬೆಂಗಳೂರು ರೆಡ್ ಝೋನ್ ಎಂದು ಘೋಷಣೆ ಆಗುತ್ತದೆ. ಅದನ್ನು ತಪ್ಪಿಸಲು ವಲಯವಾರು ವಿಂಗಡಣೆ ಮಾಡುತ್ತೇವೆ. ಈ ವಿಚಾರವಾಗಿ ಸಂಜೆ ಬಿಬಿಎಂಪಿ ಕಮಿಷನರ್ ಜೊತೆ ಮೀಟಿಂಗ್ ನಡೆಯಲಿದ್ದು ಅಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದರು.

ಮೇ 11ರಿಂದ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅನುವು ಮಾಡಿಕೊಂಡುವಂತೆ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಭಾನುವಾರ ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಕೊರೊನಾದಿಂದ ಮಾರ್ಚ್ 19ರಿಂದ ಕಿರುತೆರೆಯ ಶೂಟಿಂಗ್‍ಗೆ ಬ್ರೇಕ್ ಹಾಕಿತ್ತು. ಹೀಗಾಗಿ ಮತ್ತೆ ರಾಜ್ಯ ಸರ್ಕಾರದ ವತಿಯಿಂದ ಶೂಟಿಂಗ್ ಪ್ರಾರಂಭಿಸಲು ಅನುಮತಿ ಕೊಡಿ ಎಂದು ಎಸ್.ವಿ.ಶಿವಕುಮಾರ್ ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಮೇ 4 ರಂದು ರಾಜ್ಯದಲ್ಲಿ ಗ್ರೀನ್ ಮತ್ತು ಆರೆಂಜ್ ಝೋನ್‍ಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಆಗುತ್ತಿದೆ. ಇದೇ ನಿಟ್ಟಿನಲ್ಲಿ ನಮ್ಮ ಕ್ಷೇತ್ರಕ್ಕೂ ಸಡಿಲಿಕೆ ಮಾಡಬೇಕು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದರೆ ಒಳ್ಳೆಯದಾಗುತ್ತದೆ. ಅಂದಾಜು 120 ಧಾರಾವಾಹಿಗಳ ಶೂಟಿಂಗ್ ನಡೆಯುತ್ತಿದ್ದು, 20 ಸಾವಿರ ಕಲಾವಿದರು, ತಂತ್ರಜ್ಞರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ಅನುಮತಿ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು.

Comments

Leave a Reply

Your email address will not be published. Required fields are marked *