ಪರಿಷತ್‍ನಲ್ಲಿ ಪುಟ್ಟಣ್ಣ ಖುರ್ಚಿ ಗಲಾಟೆ ಪ್ರಸಂಗ

ಬೆಂಗಳೂರು: ವಿಧಾನ ಪರಿಷತ್ ಕಲಾಪ ಇಂದು ಖುರ್ಚಿ ಗಲಾಟೆಯೊಂದಕ್ಕೆ ಸಾಕ್ಷಿಯಾಗಿತ್ತು. ಜೆಡಿಎಸ್‍ನಿಂದ ಉಚ್ಛಾಟಿತರಾದ ಸದಸ್ಯ ಪುಟ್ಟಣ್ಣರ ಖುರ್ಚಿ ಪ್ರಸಂಗ, ಗದ್ದಲ, ಗಲಾಟೆ, ಹಾಸ್ಯಕ್ಕೆ ಸಾಕ್ಷಿಯಾಗಿ ಕೊನೆಗೆ ಸುಖಾಂತ್ಯ ಕಂಡಿತು.

ಪರಿಷತ್‍ನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್ ಮಂಗಳೂರು ಗಲಭೆಯ ಫೋಟೋಗಳನ್ನ ಸದನದಲ್ಲಿ ಪ್ರದರ್ಶನ ಮಾಡಿದ್ರು. ಈ ವೇಳೆ ಬಿಜೆಪಿ ಸದಸ್ಯರು ಫೋಟೋಗಳನ್ನು ಪ್ರದರ್ಶನ ಮಾಡಿದ್ರು. ಕೂಡಲೇ ಎದ್ದು ನಿಂತ ಸಿಎಂ ಇಬ್ರಾಹಿಂ ಈ ಫೋಟೋಗಳು ಸದನದ ಆಸ್ತಿ ಇದನ್ನ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಲು ಜೆಡಿಎಸ್ ಉಚ್ಚಾಟಿತ ಸದಸ್ಯ ಪುಟ್ಟಣ್ಣ ಎದ್ದು ನಿಂತರು. ಪುಟ್ಟಣ್ಣ ಮಾತಿಗೆ ಜೆಡಿಎಸ್ ಸದಸ್ಯರು ವಿರೋಧ ಮಾಡಿ ಗಲಾಟೆಗೆ ಮುಂದಾದರು.

ಪುಟ್ಟಣ್ಣ ಅವರ ಕೋರಿಕೆ ಮೇರೆಗೆ ಸಭಾಪತಿಗಳು ಆಡಳಿತ ಪಕ್ಷದ ಸಾಲಿನ ಕೊನೆ ಸಾಲಿನಲ್ಲಿ ಪುಟ್ಟಣ್ಣ ಅವ್ರಿಗೆ ಸೀಟು ಕೊಟ್ಟಿದ್ರು. ಹೀಗಾಗಿ ಪುಟ್ಟಣ್ಣ ಅಲ್ಲಿ ಕುಳಿತು ಮಾತನಾಡಲು ಎದ್ದರು. ಪುಟ್ಟಣ್ಣ ಮಾತನಾಡಲು ಎದ್ದಾಗ ಕೂಡಲೇ ಇದಕ್ಕೆ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪುಟ್ಟಣ್ಣ ಅವರ ಸೀಟು ನಮ್ಮ ಕಡೆ ಇದೆ. ಆದ್ರೆ ಅವರು ಬೇರೆ ಕಡೆಗೆ ಹೋಗಿ ಹೇಗೆ ಕುಳಿತುಕೊಳ್ತಾರೆ ಅಂತ ಜೆಡಿಎಸ್ ಸದಸ್ಯರು ಗದ್ದಲ ಎಬ್ಬಿಸಿದರು.

ಮೊದಲು ಪುಟ್ಟಣ್ಣರವರ ಸೀಟು ಯಾವುದು ಅಂತ ಹೇಳಿ. ಆಮೇಲೆ ಮಾತಾಡುವುದಕ್ಕೆ ಅವಕಾಶ ಕೊಡಿ ಅಂತ ಜೆಡಿಎಸ್ ಸದಸ್ಯರು ಗದ್ದಲ ಮಾಡಿದ್ರು. ಜೆಡಿಎಸ್ ಸದಸ್ಯರ ಗದ್ದಲದಿಂದ ಸಿಟ್ಟಿಗೆದ್ದ ಪುಟ್ಟಣ್ಣ, ಸಭಾಪತಿಗಳು ನನಗೆ ಈ ಸ್ಥಾನ ಕೊಟ್ಟಿದ್ದಾರೆ. ಅದಕ್ಕೆ ಕುಳಿತಿದ್ದೇನೆ. ನಾನು ಒಳಗೊಂದು ಹೊರಗೊಂದು ಇಲ್ಲ. ಯಾರಿಗೂ ಹೆದರುವುದೂ ಇಲ್ಲ. ನನಗೆ ಕೊಟ್ಟ ಸೀಟು ಕೂತಿದ್ದೀನಿ ಅಂತ ಜೆಡಿಎಸ್ ಸದಸ್ಯರ ವಿರುದ್ಧ ಕಿಡಿಕಾರಿದ್ರು. ಕೊನೆಗೆ ಪುಟ್ಟಣ್ಣಗೆ ಪ್ರತ್ಯೇಕ ಸೀಟು ಹಂಚಿಕೆ ಮಾಡಿರುವುದರ ಕುರಿತು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರು ಸ್ಪಷ್ಟನೆ ನೀಡಿದರು. ಆಗ ಗದ್ದಲ ಮಾಡುತ್ತಿದ್ದ ಜೆಡಿಎಸ್ ಸದಸ್ಯರು ಮರು ಮಾತಾಡದೇ ಸುಮ್ಮನೆ ಕುಳಿತುಕೊಂಡರು.

Comments

Leave a Reply

Your email address will not be published. Required fields are marked *