ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಮಾಧುಸ್ವಾಮಿ

ಬೆಂಗಳೂರು: ಅಗತ್ಯ ಬಿದ್ದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಭಾನುವಾರ ಹೇಳಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಇಂದು ಯೂಟರ್ನ್ ಹೊಡೆದಿದ್ದಾರೆ. ಅಷ್ಟೆ ಅಲ್ಲ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತಾನಾಡಿದ ಸಚಿವ ಮಾಧುಸ್ವಾಮಿ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ನಾನು ನಿನ್ನೆ ಉತ್ತರಿಸಿದ್ದೆ. ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ಹೆಚ್ಚು ಕಿರಿಕಿರಿ ಆಗುತ್ತಿತ್ತು. ಹೀಗಾಗಿ ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದೆ. ಆದರೆ ನನಗೆ ರಾಜೀನಾಮೆ ನೀಡುವ ಬಗ್ಗೆ ಯೋಚನೆ ಇಲ್ಲ. ಹೈಕಮಾಂಡ್ ಕೂಡ ಅಂತಹ ಪ್ರಸ್ತಾವ ಇಟ್ಟಿಲ್ಲ ಅಂತ ಸ್ಪಷ್ಟಪಡಿಸಿದರು.

ಪತ್ರಕರ್ತರು ಒತ್ತಿ ಒತ್ತಿ ಅದೇ ಪ್ರಶ್ನೆಯನ್ನ ಕೇಳಿದ್ದರು. ಹೀಗಾಗಿ ಅನಿವಾರ್ಯವಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದೆ ಅಂತ ತಿಳಿಸಿದೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಮಾತ್ರ ಆಗಲಿದೆ. ಯಾವುದೇ ಕಾರಣಕ್ಕೂ ಸಂಪುಟ ಪುನಾರಚನೆ ಆಗುವುದಿಲ್ಲ ಅಂತ ಸ್ಪಷ್ಟಪಡಿಸಿದ್ರು.

ಮೇಲ್ಮನೆ ರದ್ದು ಮಾಡೋ ಪ್ರಸ್ತಾಪವಿಲ್ಲ:
ವಿಪಕ್ಷಗಳು ಪ್ರಮುಖ ಬಿಲ್ ಗಳಿಗೆ ತೊಡಕು ಹಾಕುತ್ತಿದೆ ಅಂತ ಆಂಧ್ರ ಪ್ರದೇಶದಲ್ಲಿ ಮೇಲ್ಮನೆಯನ್ನೆ ರದ್ದು ಮಾಡಲು ಹೊರಟಿರುವ ಸಿಎಂ ಜಗನ್ ರೆಡ್ಡಿ ನಿಲುವಿಗೆ ಕರ್ನಾಟಕ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದೆ. ಸಚಿವ ಮಾಧುಸ್ವಾಮಿ ಅವರೇ ನಮ್ಮ ರಾಜ್ಯದಲ್ಲಿ ಮೇಲ್ಮನೆ ರದ್ದು ಮಾಡೊಲ್ಲ ಅನ್ನೋ ಮೂಲಕ ಜಗನ್ ಪ್ರಸ್ತಾಪಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

ರಾಜ್ಯದಲ್ಲೂ ಮೇಲ್ಮನೆ ರದ್ದು ಮಾಡೋ ಚಿಂತನೆ ಇದೆಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಮೇಲ್ಮನೆ ರದ್ದು ಮಾಡೋ ಬಗ್ಗೆ ಪ್ರಸ್ತಾಪವೂ ಇಲ್ಲ ಅಂತಹ ಚಿಂತನೆ ಇಲ್ಲ ಅಂದರು. ಇದೇ ವೇಳೆ ತಮ್ಮದೇ ಉದಾಹರಣೆಯೊಂದನ್ನ ಕೊಟ್ಟ ಸಚಿವರು, ಹಿಂದೊಮ್ಮೆ ನನ್ನ ಕೆಲಸಕ್ಕೆ ವಿಧಾನ ಪರಿಷತ್ ಸದಸ್ಯರು ತೊಂದರೆ ಕೊಟ್ಟಿದ್ರು. ಆಗ ನನಗೆ ಕೋಪ ಬಂದು ವಿಧಾನ ಪರಿಷತನ್ನೇ ರದ್ದು ಮಾಡಬೇಕು ಅಂತ ತಮಾಷೆಗೆ ಹೇಳಿದ್ದೆ. ಆದರೆ ಸದ್ಯ ತಮ್ಮ ಮುಂದೆ ಮೇಲ್ಮನೆ ರದ್ದು ಮಾಡೋ ಬಗ್ಗೆ ಪ್ರಸ್ತಾಪವೇ ಇಲ್ಲ. ಚಿಂತನೆಯೂ ಇಲ್ಲ ಅಂತ ಸ್ಪಷ್ಟಪಡಿಸಿದ್ರು.

Comments

Leave a Reply

Your email address will not be published. Required fields are marked *