ಇಬ್ಬರು ಹಾಲಿ ಸಚಿವರಿಗೆ ಹೈಕಮಾಂಡ್ ಶಾಕ್?

ಬೆಂಗಳೂರು: ಸಂಪುಟ ವಿಸ್ತರಣೆ ಸರ್ಕಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶೀಘ್ರದಲ್ಲೇ ನಡೆಯುವ ಸಂಪುಟ ವಿಸ್ತರಣೆ ಯಾವ ರೀತಿ ನಡೆಯಲಿದೆ ಅನ್ನೋದೇ ಕುತೂಹಲ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಯಾವ ಕೆಲವು ಅವಕಾಶಗಳನ್ನು ತನ್ನ ಮುಂದಿರಿಸಿಕೊಂಡಿದೆ. ಇದರ ಭಾಗವಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ಶಾಕ್ ಕೊಡಲು ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಶಾಕ್ ಕೆಲ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವ ಮೂಲಕವಾಗಲಿ ಅಥವಾ ಕೆಲವರ ಖಾತೆಗಳ ಬದಲಾವಣೆ ಮೂಲಕವಾಗಲಿ ಬರಲಿದೆ ಎಂದು ಹೇಳಲಾಗುತ್ತಿದೆ.

ಸದ್ಯದ ಮಾಹಿತಿಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಇಬ್ಬರು ಹಾಲಿ ಸಚಿವರಿಗೆ ಹೈಕಮಾಂಡ್ ಕಡೆಯಿಂದ ಶಾಕ್ ಕಾದಿದೆ. ಸಂಪುಟದಿಂದ ಇಬ್ಬರು ಸಚಿವರಿಗೆ ಹೈಕಮಾಂಡ್ ಕೊಕ್ ಕೊಡಲಿದೆ. ಇಬ್ಬರನ್ನು ಕೈಬಿಟ್ಟು ಅವರ ಸ್ಥಾನಗಳಿಗೆ ಮತ್ತಿಬ್ಬರನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್ ಪ್ಲಾನ್ ಮಾಡ್ಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

ಇಬ್ಬರು ಹಾಲಿ ಸಚಿವರು ಯಾರು?:
ಬಿಜೆಪಿ ಮೂಲಗಳ ಪ್ರಕಾರ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಅರಣ್ಯ ಸಚಿವ ಸಿ.ಸಿ ಪಾಟೀಲ್ ಅವರಿಗೆ ಸಂಪುಟದಿಂದ ಕೊಕ್ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಡಿಸಿಎಂ ಲಕ್ಷ್ಮಣ್ ಸವದಿಗೆ ವಿಧಾನ ಪರಿಷತ್ ಸ್ಥಾನ ಬಹುತೇಕ ಪಕ್ಕಾ ಆಗಿದೆ. ಲಕ್ಷ್ಮಣ್ ಸವದಿ ಪರಿಷತ್ ಗೆ ಆಯ್ಕೆಯಾದರೆ ಹಾಲಿ ಸಚಿವ ಮತ್ತು ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ಬಲಿಯಾಗ್ತಾರಾ ಅನ್ನುವ ಪ್ರಶ್ನೆ ಮೂಡಿದೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಗೆ ಕೊಕ್ ಕೊಡುತ್ತಾ ಹೈಕಮಾಂಡ್ ಎನ್ನುವ ಚರ್ಚೆ ನಡೆಯುತ್ತಿದೆ.

ಪರಿಷತ್‍ಗೆ ಆಯ್ಕೆಯಾಗುವ ಲಕ್ಷ್ಮಣ್ ಸವದಿಯವರನ್ನು ಸಭಾನಾಯಕ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಸವದಿ ಪರಿಷತ್ ಸಭಾ ನಾಯಕರಾದರೆ ಕೋಟ ಶ್ರೀನಿವಾಸ್ ಪೂಜಾರಿಗೆ ಕೊಕ್ ಸಿಗಲಿದೆಯಾ ಅನ್ನೋ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ.

ಮತ್ತೊಬ್ಬ ಸಚಿವ ಸಿ.ಸಿ ಪಾಟೀಲ್‍ಗೂ ಸಂಪುಟದಿಂದ ಕೈಬಿಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಸಚಿವ ಸಿ.ಸಿ ಪಾಟೀಲ್‍ಗೆ ಕೊಕ್ ಕೊಟ್ಟು ಮತ್ತೊಬ್ಬ ಹಿರಿಯ ಶಾಸಕರಿಗೆ ಸಚಿವ ಗಿರಿ ಕೊಡ್ತಾರೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಮಟ್ಟದಲ್ಲಿ ಪ್ರಭಾವಿಯಾಗಿರುವ ನಾಯಕರೊಬ್ಬರು ತಮ್ಮ ಬೆಂಬಲಿಗ ಶಾಸಕರೊಬ್ಬರಿಗೆ ಸಿ.ಸಿ ಪಾಟೀಲ್ ಬದಲಿಸಿ ಸಚಿವಾರಾಗಿಸಲು ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿ.ಸಿ ಪಾಟೀಲ್ ಬದಲು ಸಂಪುಟ ಸೇರುವ ಆ ಮತ್ತೊಬ್ಬ ಶಾಸಕ ಯಾರು ಅನ್ನೋದು ಸದ್ಯಕ್ಕೆ ಗೊತ್ತಾಗಿಲ್ಲ.

ಒಟ್ಟಿನಲ್ಲಿ ಸದ್ಯದಲ್ಲೇ ನಡೆಯುವ ಸಂಪುಟ ವಿಸ್ತರಣೆ ವೇಳೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಸಿ.ಸಿ ಪಾಟೀಲ್ ಮಾಜಿಗಳಾಗ್ತಾರಾ ಅನ್ನೋ ಸುದ್ದಿ ಮಾತ್ರ ರೆಕ್ಕೆ ಕಟ್ಟಿಕೊಂಡು ಓಡಾಡುತ್ತಿದೆ.

Comments

Leave a Reply

Your email address will not be published. Required fields are marked *