ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಅನ್ವಯವಾದ ನಿಯಮವೇ ಅನರ್ಹ ಶಾಸಕರಿಗೂ ಅನ್ವಯ ಆಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ಹೈಕಮಾಂಡ್ ಅನರ್ಹ ಶಾಸಕರಿಗೆ ಶಾಕ್ ನೀಡಿದೆ.
ಫಾದರ್ ಕಮ್ ಸನ್ಸ್ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಿರುವ ಬಿಜೆಪಿ ಹೈಕಮಾಂಡ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದ್ದನ್ನೇ ಪ್ರಸ್ತಾಪಿಸಿ ಅನರ್ಹರಿಗೂ ಇದೇ ನಿಯಮ ಅನ್ವಯ ಆಗುತ್ತದೆ ಎಂದು ತಿಳಿಸಿದೆ.

ಈ ನಿಯಮದ ಪ್ರಕಾರ ಈ ಉಪಚುನಾವಣೆಯಲ್ಲಿ ಅಪ್ಪನಿಗೆ ಮಾತ್ರ ಬಿಜೆಪಿಯಿಂದ ಟಿಕೆಟ್ ಸಿಗಲಿದ್ದು, ಅಪ್ಪನ ಹೆಸರಿನಲ್ಲಿ ಮಗನಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಈ ನಿಯಮದಿಂದ ಮಗನನ್ನು ಹುಣುಸೂರು ಕ್ಷೇತ್ರದಲ್ಲಿ ನಿಲ್ಲಿಸಬೇಕು ಎಂದುಕೊಂಡಿದ್ದ ಅನರ್ಹ ಶಾಸಕ ಹೆಚ್ ವಿಶ್ವನಾಥ್‍ಗೆ ಬಿಗ್ ಶಾಕ್ ಆಗಿದೆ.
ಈ ವಿಚಾರವಾಗಿ ಮೈಸೂರು ದಸರಾ ಉದ್ಘಾಟನೆಗೆ ಹೋಗಿದ್ದಾಗ ವಿಶ್ವನಾಥ್ ಜತೆ ಸಿಎಂ ಬಿಎಸ್‍ವೈ ಮಾತನಾಡಿದ್ದು, ಚುನಾವಣೆಗೆ ನಿಂತರೆ ನೀವು ನಿಲ್ಲಬೇಕು ವಿಶ್ವನಾಥ್, ಇಲ್ಲದಿದ್ದರೆ ವಿಧಾನ ಪರಿಷತ್ ಸದಸ್ಯರಗಲು ರೆಡಿಯಾಗಿ. ಆದರೆ ಬಿಜೆಪಿಯಿಂದ ಮಕ್ಕಳಿಗೆ ಟಿಕೆಟ್ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೈಕಮಾಂಡ್ ಹೇಳಿರುವ ಈ ನಿಯಮಕ್ಕೆ ವಿಶ್ವನಾಥ್, ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅನರ್ಹರ ಪ್ರಕರಣ ಈಗ ಸುಪ್ರೀಂ ಕೋರ್ಟಿನಲ್ಲಿ. ಒಂದು ವೇಳೆ ಪರವಾಗಿ ತೀರ್ಪು ಬಂದರೆ ಸ್ಪರ್ಧೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ವಿರುದ್ಧ ತೀರ್ಪು ಬಂದರೆ ಈ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

Leave a Reply