ಪಕ್ಷದಲ್ಲಿ ಹಿಡಿತ ಸಾಧಿಸ್ತಿದ್ದಾರೆ ಕಟೀಲ್- ಇತ್ತ ಆತಂಕದಲ್ಲಿ ಬಿಎಸ್‍ವೈ

ಬೆಂಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಪಕ್ಷದಲ್ಲಿ ಹಿಡಿತ ಸಾಧಿಸುತ್ತಿದ್ದು, ಇತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆತಂಕಕ್ಕೀಡಾಗಿದ್ದಾ ರೆ.

ಬಿಎಸ್‍ವೈ ಮಾತ್ರವಲ್ಲದೆ ಅವರ ಆಪ್ತರೂ ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಏನ್ ಮಾಡೋದು, ಎಲ್ಲಿ ಹೋಗೋದು ಎಂಬ ಪ್ರಶ್ನೆ ಸಿಎಂ ಆಪ್ತರಿಗೆ ಕಾಡುತ್ತಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸರ್ಕಾರದಲ್ಲಿ ಯಡಿಯೂರಪ್ಪ ಒಬ್ಬಂಟಿಯಾಗಿ ಬಹಳ ದಿನಗಳಾದವು. ಈಗ ಪಕ್ಷದಲ್ಲೂ ಯಡಿಯೂರಪ್ಪ ಮತ್ತು ಅವರ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಪಕ್ಷದ ಮೇಲೆ ಯಡಿಯೂರಪ್ಪ ಹಿಡಿತ ಕಳೆದುಕೊಂಡಿದ್ದು, ಮೊದಲಿನ ಹಾಗೆ ಪಕ್ಷಕ್ಕೆ ಎಲ್ಲವೂ ಆಗಿದ್ದ ಯಡಿಯೂರಪ್ಪ ಈಗ ಏನೂ ಅಲ್ಲ ಎಂಬಂತೆ ಇದ್ದಾರೆ ಎನ್ನಲಾಗಿದೆ.

ಪಕ್ಷದಲ್ಲಿ ಯಡಿಯೂರಪ್ಪ ಮಾತು ಕೇಳೋರು ಯಾರೂ ಇಲ್ಲ. ಎಲ್ಲ ನಿರ್ಧಾರಗಳನ್ನೂ ಕಟೀಲ್ ಅವರೇ ಏಕಪಕ್ಷೀಯವಾಗಿ ಕೈಗೊಳ್ಳುತ್ತಿದ್ದಾರೆ. ಪಕ್ಷದೊಳಗಿನ ಪದಾಧಿಕಾರಿಗಳ ನೇಮಕ, ಪಕ್ಷ ಸಂಘಟನೆ ಕುರಿತು ಬಿಎಸ್‍ವೈಗೂ ಕಟೀಲ್ ಕ್ಯಾರೇ ಎನ್ನುತ್ತಿಲ್ಲ. ಈ ಮೂಲಕ ಕಟೀಲ್ ಬೆಂಗಳೂರಿನ ನಾಯಕರನ್ನು ತಮ್ಮತ್ತ ಒಲಿಸಿಕೊಂಡಿದ್ದಾರೆ. ಆರ್ ಅಶೋಕ್, ಅಶ್ವಥ್ ನಾರಾಯಣ ಹಾಗೂ ವಿ ಸೋಮಣ್ಣ ಅವರನ್ನೂ ಕಟೀಲ್ ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೀಗಾಗಿ ಸದ್ಯ ಯಡಿಯೂರಪ್ಪ ಹಿಂದೆ ಬೆರಳೆಣಿಕೆಯಷ್ಟು ಮಂದಿ ಆಪ್ತರಷ್ಟೇ ಉಳಿದುಕೊಂಡಿದ್ದಾರೆ ಎಂಬುದಾಗಿ ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಅತ್ತ ಸರ್ಕಾರದಲ್ಲಿ ಅಮಿತ್ ಶಾ, ಬಿ.ಎಲ್ ಸಂತೋಷ್ ಕಂಟ್ರೋಲ್ ಇದ್ದರೆ, ಇತ್ತ ಪಕ್ಷದಲ್ಲೂ ನಳೀನ್ ಕುಮಾರ್ ಕಟೀಲ್ ಮತ್ತು ಬಿ.ಎಲ್ ಸಂತೋಷ್ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಬಿಎಸ್‍ವೈ ಅವರು ಏಕಾಂಗಿಯಾದ್ರಾ ಅನ್ನೋ ಪ್ರಶ್ನೆ ಎದ್ದಿದೆ.

Comments

Leave a Reply

Your email address will not be published. Required fields are marked *