ಹುಟ್ಟುಹಬ್ಬಕ್ಕೆ ಪತ್ನಿ ಕೊಟ್ಟ ಪ್ರೀತಿಯ ಓಲೆ ನೆನಪು ತೆರೆದಿಟ್ಟ ಜಗ್ಗೇಶ್

ಬೆಂಗಳೂರು: ಇಂದು ನವರಸ ನಾಯಕ ಜಗ್ಗೇಶ್ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಪತ್ನಿ ಪರಿಮಳಾ ಅವರು ಮದುವೆಯಾದ ಮೊದಲ ವರ್ಷ ಹೇಗೆ ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಎನ್ನುವ ಸವಿ ನೆನಪನ್ನು ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ.

ಮದುವೆಯಾದ ಮೊದಲ ವರ್ಷ ಪರಿಮಳಾ ಅವರು ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಕೈಯಾರೆ ಮಾಡಿಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ. ಈ ಪ್ರೀತಿಯ ಓಲೆಗೆ 34 ವರ್ಷ ವಯಸ್ಸು, ನಾವು ಮದುವೆಯಾದ ವರ್ಷ ನನ್ನ ಪತ್ನಿ ಮಾತ್ರ ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಳು. ಆದ್ರೆ ಇಂದು ನನ್ನ ಪತ್ನಿ ಜೊತೆಗೆ ನನ್ನ ಅಭಿಮಾನಿಗಳು ಕೂಡ ನನ್ನ ಜನ್ಮದಿನಕ್ಕೆ ಶುಭಹಾರೈಸಿ ಆಶೀರ್ವದಿಸಿದ್ದಾರೆ ಎಂದು ಜಗ್ಗೇಶ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ, ನಾನು ಮದುವೆಯಾದ ಮೊದಲ ವರ್ಷ ಪರಿಮಳ ಕೈಯಾರೆ ನನ್ನ ಆನಡಗು ಗ್ರಾಮದಲ್ಲಿ ಮಾಡಿ ಹರಸಿದ ಪ್ರಥಮ ಶುಭಹಾರೈಕೆಯ ಪ್ರೀತಿಯ ಓಲೆ. ಈ ಪ್ರೀತಿ ಸಂಕೇತಕ್ಕೆ 34 ವರ್ಷ ವಯಸ್ಸು. ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು. ಧನ್ಯೋಸ್ಮಿ ರಾಯರೆ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ ಎಂದು ಬರೆದು, ಪತ್ನಿ ಪರಿಮಳಾ ಅವರು ಹುಟ್ಟುಹಬ್ಬಕ್ಕೆ ನೀಡಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ಶೇರ್ ಮಾಡಿಕೊಂಡಿದ್ದಾರೆ.

ಜಗ್ಗೇಶ್ ಅವರು ಪ್ರತಿ ವರ್ಷದಂತೆ ಈ ಬಾರಿ ಕೂಡ ಹುಟ್ಟುಹಬ್ಬದ ದಿನ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಜಗ್ಗೇಶ್ ಕೊರೊನಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೊರೊನಾ ಇದು ಮಾನವ ನಿರ್ಮಿತ ವೈರಾಣು. ಅಮೆರಿಕ, ರಷ್ಯಾ ಹಾಗೂ ಚೀನಾ ನಂಬರ್ ಒನ್ ಸ್ಥಾನಕ್ಕಾಗಿ ನಡೆದಿರುವ ಬಯೋಲಾಜಿಕಲ್ ವಾರ್ ಇದು. ಪ್ರಕೃತಿ ಆಗಾಗ ಇಂತಹ ರೋಗಗಳಿಂದ ಮಾನವನಿಗೆ ಎಚ್ಚರಿಸುತ್ತಿದೆ. ಈ ಹಿಂದಿನ ಶತಮಾನದಲ್ಲಿ ಪ್ಲೇಗ್ ಬಂದಿತ್ತು. ಈಗ ಕೊರೊನಾ ಬಂದಿದೆ. ಕೊರೊನಾ ಬಗ್ಗೆ ಭಯಬೇಡ ಜಾಗೃತಿಯಿಂದ ಇರಿ ಎಂದು ಹೇಳಿದರು.

ಇದೇ ವೇಳೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶುಭಾಶಯ ಕೋರಿದರು. ಈ ನಾಡಿನ ಹೆಸರಾಂತ ನಟ, ಹಿರಿಯರ ಮಗ, ರಾಯರು ಪುನೀತ್‍ಗೆ ಆಯು, ಆರೋಗ್ಯ, ಭಾಗ್ಯ ನೀಡಲಿ ಎಂದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಹೋರಾಟಗಾರ ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಜಗ್ಗೇಶ್ ಸಂತಾಪ ಸೂಚಿಸಿದರು. 102 ವರ್ಷ ಈ ನಾಡು ನುಡಿಗಾಗಿ ಹೋರಾಟ ಮಾಡಿದ ಜೀವ ಅದು. ಅವರು ವಿಶ್ವೇಶ್ವರಯ್ಯನಂತೆ ಈ ನಾಡಿಗೆ ಶ್ರಮಿಸಿದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *