ಬಿಬಿಎಂಪಿ ಮೇಯರ್ ಚುನಾವಣೆ – ಕೈ, ತೆನೆ ಮೈತ್ರಿ ಅಭ್ಯರ್ಥಿ ಫೈನಲ್

ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಮಂಗಳವಾರ ನಡೆಯಲಿದ್ದು, ಈ ಬಾರಿಯೂ ಬಿಬಿಎಂಪಿಯಲ್ಲಿ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿದೆ. ಮೈತ್ರಿ ಅನ್ವಯ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್‍ಗೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗಿದೆ.

ಮೈತ್ರಿ ಅನ್ವಯ ಕಾಂಗ್ರೆಸ್, ಜೆಡಿಎಸ್‍ನಿಂದ ಮೇಯರ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ದತ್ತಾತ್ರೇಯ ವಾರ್ಡ್ ಸದಸ್ಯರಾದ ಸತ್ಯನಾರಾಯಣರನ್ನು  ಆಯ್ಕೆ ಮಾಡಲಾಗಿದ್ದು, ಕೆಪಿಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಮಂಗಳವಾರ ಸತ್ಯನಾರಾಯಣ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಇತ್ತ ಉಪಮೇಯರ್ ಸ್ಥಾನಕ್ಕೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಶಕ್ತಿ ಗಣಪತಿ ವಾರ್ಡ್ 74ರ ಪಾಲಿಕೆ ಸದಸ್ಯೆ ಗಂಗಮ್ಮ ರಾಜಣ್ಣ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಜೆಡಿಎಸ್ ವರಿಷ್ಠರು ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ವಾರ್ಡ್ 32 ಕಾವಲಭೈರಸಂದ್ರ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ ಅಥವಾ ಇಮ್ರಾನ್ ಪಾಷಾ ಅವರಿಗೆ ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ನಡೆಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿತ್ತು.

ಬಿಜೆಪಿ ಪಳಯದಲ್ಲಿ ಅಭ್ಯರ್ಥಿ ಫೈನಲ್ ಮಾಡಲು ಭಾರೀ ಚರ್ಚೆ ನಡೆಯುತ್ತಿದೆ. ಸತತ 2 ಗಂಟೆಗಳ ಅವಧಿಯ ಸಭೆಯ ಬಳಿಕವೂ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಪ್ರಮುಖವಾಗಿ ಬಿಜೆಪಿಯಿಂದ ಮುನೇಂದ್ರ ಕುಮಾರ್, ಎಲ್ ಶ್ರೀನಿವಾಸ್, ಪದ್ಮನಾಭ ರೆಡ್ಡಿ, ಬಾಲಕೃಷ್ಣ ಅವರ ನಡುವೆ ಮೇಯರ್ ಸ್ಥಾನ ಸ್ಪರ್ಧೆಗೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *