ಅಯ್ಯಪ್ಪ ದೊರೆ ನಂತರ, ನನ್ನ ಕೊಲೆಗೂ ಸಂಚು ರೂಪಿಸಲಾಗಿದೆ- ವಿವಿ ಸಂಸ್ಥಾಪಕ

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಕೊಲೆ ವ್ಯವಸ್ಥಿತವಾಗಿ ನಡೆಸಿದ್ದು, ನನ್ನ ಕೊಲೆಗೂ ಸಂಚು ರೂಪಿಸಿರುವುದು ಅಘಾತಕಾರಿ ಸಂಗತಿಯಾಗಿದೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್ ಆತಂಕ ವ್ಯಕ್ತಪಡಿಸಿದ್ದಾರೆ.

ಆನೇಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಲಯನ್ಸ್ ಕಾಲೇಜು ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಕೊಲೆಯ ನಂತರ ನನ್ನ ಕೊಲೆಗೂ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ತಿಳಿದಿದ್ದು, ದೊಡ್ಡ ಅಘಾತವಾಗಿದೆ. ಪೊಲೀಸರು ನನಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅಯ್ಯಪ್ಪ ದೊರೆ ನಮ್ಮ ವಿವಿಯ ಮೊದಲ ಚಾನ್ಸಲರ್ ಆಗಿದ್ದರು. ಅವರು ತುಂಬಾ ಶ್ರಮ ವಹಿಸಿದ್ದಾರೆ. ಆ ವ್ಯಕ್ತಿಯನ್ನು ಕಳೆದುಕೊಂಡು ತುಂಬಾ ನೋವಾಗಿದೆ. ಈ ಘಟನೆ ನನಗೆ ಮತ್ತು ಇಡೀ ವಿಶ್ವವಿದ್ಯಾಲಯಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದರು.

ಅಯ್ಯಪ್ಪ ದೊರೆ ಕೊಲೆ ವ್ಯವಸ್ಥಿತವಾಗಿ ನಡೆಸಿರುವ ಬಗ್ಗೆ ಪೊಲೀಸರು ನನಗೆ ಮಾಹಿತಿ ನೀಡಿದ್ದು, ನನ್ನ ಕೊಲೆಗೂ ಸಂಚು ರೂಪಿಸಿರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ನನಗೆ ದೊಡ್ಡ ಅಘಾತವಾಗಿದೆ. ನಾನು ಶೈಲಜಾ ಚಬ್ಬಿ, ಸುದೀರ್ ಅಂಗೂರ್, ಮಾಲಾ ಗೌಡ, ಅಬ್ಬಯ್ ಜಬ್ಬಿ, ಉಷಾ ಮಾಡಳ್ಳಿ ಹಾಗೂ ಪ್ರಕಾಶ್ ಅವರನ್ನು ನಾನು ಸಂಬಂಧಿಕರೆಂದು ಕರೆಯುವುದಿಲ್ಲ. ಅವರನ್ನು ಉದ್ಯೋಗಿಗಳನ್ನಾಗಿ ತೆಗೆದುಕೊಂಡಿದ್ದೆ. ನಾನು ಯಾರನ್ನೂ ಸಂಬಂಧಿಕರೆಂದು ನೋಡಿಲ್ಲ ಎಂದು ಹೇಳಿದರು.

ಕ್ರಮೇಣವಾಗಿ ವಿಶ್ವವಿದ್ಯಾಲಯ ಬೆಳೆದಾಗ ಎಲ್ಲರೂ ಸುಖ ಪಡಬೇಕು, ಖುಷಿ ಪಡಬೇಕಿತ್ತು. ಆದರೆ ಅವರಿಗೆ ಮತ್ಸರ ಉಂಟಾಯಿತು. ಆಗ ವಿವಿಯ ಹಣವನ್ನು ಅಕ್ರಮವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಈ ವೇಳೆ ಇವರ ಹೆಸರು ಬಯಲಿಗೆ ಬಂದಿತು. ನಂತರ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಈ ಮೂಲಕ ಅವರು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಹಲವು ಬಾರಿ ನನ್ನ ಮೇಲೆ ಪಿತೂರಿ ಮಾಡಿದ್ದಾರೆ. ಇವರು ನನಗೆ ಬಹಳಷ್ಟು ಕಿರುಕುಳ ನೀಡಿದ್ದು, ಇವರೆಲ್ಲರದ್ದು ಒಂದು ಗ್ಯಾಂಗ್ ಆಗಿದೆ. ನನ್ನ ಸಹಿಯನ್ನು ನಕಲಿ ಮಾಡಿ ಹಣ ಮಾಡಿದ್ದಾರೆ. ಇದೀಗ ನವೆಂಬರ್ 3 ನಡೆಯುವ ಘಟಿಕೋತ್ಸವಕ್ಕೆ ಯಾವುದೇ ಬೆಲೆಯಿಲ್ಲ. ಹೀಗಾಗಿ ಘಟಿಕೋತ್ಸವ ನಡೆಯಲು ಅನುಮತಿ ನೀಡದಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವ ವಿದ್ಯಾರ್ಥಿಗಳಿಗೂ ತೊಂದರೆಯಾಗಬಾರದು, ಹೀಗಾಗಿ ಘಟಿಕೋತ್ಸವ ರದ್ದುಪಡಿಸಬೇಕು ಎಂದು ಮಧುಕರ್ ಅಂಗುರ್ ಹೇಳಿದರು.

Comments

Leave a Reply

Your email address will not be published. Required fields are marked *