ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚೇತನ್-ಮೇಘಾ ಸಿಂಪಲ್ ವಿವಾಹ

ಬೆಂಗಳೂರು: ಆ ದಿನಗಳು ಚಿತ್ರದ ಖ್ಯಾತಿಯ ನಟ ಚೇತನ್ ಅವರು ತಮ್ಮ ಗೆಳತಿ ಮೇಘಾರನ್ನು ಇಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಮದುವೆಯಾಗಿದ್ದಾರೆ.

ಸದಾ ಸಾಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಚೇತನ್ ಅವರು ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ ಇಂದು ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿರುವ ಚೇತನ್-ಮೇಘಾ ನಾಳೆ ಆಶ್ರಮದಲ್ಲಿ ಮದುವೆ ಕಾರ್ಯ ಮಾಡಿಕೊಳ್ಳಲಿದ್ದಾರೆ.

ಇಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗುವ ಮೂಲಕ ಚೇತನ್ ಮತ್ತು ಮೇಘಾ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಚೇತನ್ ಅವರೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಶೇಷ ವಿವಾಹ ಕಾಯ್ದೆಯಡಿ ಇಂದು ಗಾಂಧಿನಗರದ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ಮೇಘಾ ಮತ್ತು ನನ್ನ ವಿವಾಹ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಚೇತನ್ ಹಾಗೂ ಮೇಘಾ ಒಟ್ಟಿಗೆ ಸೇರಿ ತಂದೆ-ತಾಯಿ ಇಲ್ಲದೆ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಸಹಾಯ ಮಾಡಿದ್ದರು. ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ನೀಡಿ ಮಕ್ಕಳು ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ಬಗ್ಗೆ ಚೇತನ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದು, ಜೋಡಿಯ ಈ ಸೇವೆಗೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಚೇತನ್ ಹಾಗೂ ಮೇಘಾ ಇತ್ತೀಚೆಗೆ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದರು. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು.

Comments

Leave a Reply

Your email address will not be published. Required fields are marked *